ಈ ರಾಶಿಯವರು ಚಂಚಲತೆ ಕಡಿಮೆ ಮಾಡಿ ಭಗವಂತನಲ್ಲಿ ಲೀನ ಮಾಡಿ: ವಾರಭವಿಷ್ಯ

VARA BHAVISHYA
Published on
weekly horscope
ಮೇಷ ರಾಶಿ

ಈ ವಾರ ಆಶ್ವೀಜ ಶುದ್ಧ ಪಾಡ್ಯದಿಂದ ಶರನ್ನವರಾತ್ರಿ ಆರಂಭ ಆಗುತ್ತದೆ. ನೀವು ಮಾಡಿದ ಪುಣ್ಯ ಕೆಲಸಗಳು ಫಲ ಕೊಟ್ಟೆ ಕೊಡುತ್ತವೆ. ಪಿತೃಗಳ ಕಾರ್ಯಗಳನ್ನು ಈವರೆಗೂ ಮಾಡದಿದ್ದರೆ ಮೇಷ ರಾಶಿಯಯವರು ಕ್ಷೇತ್ರ ಶ್ರಾದ್ಧವನ್ನಾದರೂ ಮಾಡಿ ಮತ್ತು ಮಾತೃ ಪಕ್ಷದ ನವರಾತ್ರಿಯಲ್ಲಿ ದೇವಿಯನ್ನು ಅರ್ಚಿಸಿದರೆ ಎಲ್ಲ ವಿಘ್ನಗಳು ದೂರ ಆಗಿ ಘನತೆ, ಗೌರವ, ದೈವ ಬಲವು ಉಂಟಾಗುವುದರಲ್ಲಿ ಸಂದೇಹವಿಲ್ಲ. ಅಕ್ಟೋಬರ್ 30ರಂದು ರಾಹು 12ಕ್ಕೆ ಬಂದ ಮೇಲೆ ನೀವು ನಿಮ್ಮ ಕೆಲಸದಲ್ಲಿ ಮುಂದೆ ಹೋಗಲು ಅನುಕೂಲಕರ ದಿನಗಳು ಬರುತ್ತವೆ. ಸುಬ್ರಹ್ಮಣ್ಯನನ್ನು ಪೂಜಿಸಿ.

ವೃಷಭ ರಾಶಿ

12ರಲ್ಲಿ ಗುರುವು ರಾಹುವಿನಿಂದ ಬೇರ್ಪಟ್ಟ ಮೇಲೆ ಅನೇಕ ರೀತಿಯ ಅನುಕೂಲಗಳು ಆದರೂ, ದ್ವಾದಶ ಗುರು ಜನ್ಮಕ್ಕೆ ಬಂದಾಗಲೇ ಸ್ಥಗಿತ ಕಾರ್ಯ ಮುಂದಕ್ಕೆ ಸಾಗುತ್ತದೆ. ದುರ್ಗಾ ದೇವಿ ಅರ್ಚಿಸಿ. ದುರ್ಗಾ ಸಹಸ್ರನಾಮ ಮಾಡಿ. ನಿಮ್ಮ ಮನೋ ಇಚ್ಛೆ ಪೂರೈಸಿ. ದೋಣಿ ಸಾಗಲಿ ಮುಂದೆ ಹೋಗಲಿ. ನಿಮ್ಮ ನಿಂತು ಹೋದ ಕಾರ್ಯಗಳು ದಡ ಸೇರುತ್ತವೆ.

ಮಿಥುನ ರಾಶಿ

ಏಕಾದಶ ಗುರು, 9ರ ಶನಿ ಇದರ ಫಲ ಪಡೆಯಬೇಕೆ ಹೊರತು ಗಾಳಿಗೆ ಮೈ ಗುದ್ದಿಕೊಂಡರೆ ನಷ್ಟ ನಿಮಗೆ. ಮನುಷ್ಯ ತಾನು ತಿದ್ದಿಕೊಂಡು ಬಾಳಬೇಕು. ಎಲ್ಲರಲ್ಲಿ ಸಂತೋಷ ಹಂಚಿಕೊಂಡರೆ ಬುಧನ ಆಧಿಪತ್ಯ ಇರುವ ಮಿಥುನ ರಾಶಿ ಅಧಿಕ ಫಲ ಪಡೆಯಬಹುದು. ತುಳಜಾ ಭವಾನಿ ಪೂಜಿಸಿ. ಲಲಿತಾ ಅಷ್ಟೋತ್ತರ ಪಾರಾಯಣ ಮಾಡಿ. ಎಲ್ಲ ತರಹದ ಸುಖ ಬಂದು ಸೇರುವುದು.

ಕಟಕ ರಾಶಿ

ನೀರು ಎಷ್ಟು ಬೇಗ ಕಲ್ಮಶ ಆಗುವುದೋ ಅಷ್ಟೇ ಬೇಗ ತಿಳಿ ಆಗುವುದು. ತಿಳಿಯಾದ ನೀರಿನಂತೆ ನಿಮ್ಮ ಮನಸನ್ನು ಇಟ್ಟುಕೊಂಡು ಚಂಚಲತೆ ಕಡಿಮೆ ಮಾಡಿ ಭಗವಂತನಲ್ಲಿ ಲೀನ ಮಾಡಿ. ಅಷ್ಟಮ ಶನಿ, ದಶಮ ಗುರುವಿಗೆ ನಿಮ್ಮ ಇಷ್ಟ ದೇವರನ್ನು ಪೂಜಿಸಿ, ಭಜಿಸಿ. ಕಾರ್ಯಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತವೆ.

ಸಿಂಹ ರಾಶಿ

ಲಗ್ನದಲ್ಲಿ ಶುಕ್ರನಿದ್ದು, ಅಧಿಕ ಖರ್ಚು ವೆಚ್ಚ ಬಂದು ಸ್ವಲ್ಪ ಹಣಕಾಸಿನ ಮುಗ್ಗಟ್ಟು ಉಂಟಾಗಬಹುದು. ಜೋಪಾನವಾಗಿ ಹೆಜ್ಜೆ ಹಾಕಿ ಖರ್ಚು ಕಡಿಮೆ ಮಾಡಿ. ಮಹಾಲಕ್ಷ್ಮಿ ಪೂಜಿಸಿದರೆ ಧನ ಸಂಪತ್ತು ಧಾನ್ಯ ಕೊಟ್ಟೆ ಕೊಡುತ್ತಾಳೆ. ಸಿಂಹ ರಾಶಿಯಲ್ಲಿ ಜನಿಸಿದ ನೀವು ರಾಮನನ್ನು ಸತತವಾಗಿ ಪೂಜಿಸಿದರೆ ಸದೃಢವಾದ ವಜ್ರ ದೇಹದವರಾಗುತ್ತೀರ. ಸೂರ್ಯ ನಮಸ್ಕಾರದಿಂದ ನಿಮ್ಮ ತೇಜಸ್ಸು ವೃದ್ಧಿಸುವುದು.

ಕನ್ಯಾ ರಾಶಿ

4 ನವೆಂಬರ್ 2023ರಂದು ಶನಿ ವಕ್ರತ್ವ ಹೋಗಿ ಇನ್ನೂ ಒಳ್ಳೆ ಸಮಯ ಬರುತ್ತದೆ. ಆರರ ಶನಿ ಸಮಸ್ಯೆ ಬಗೆಹರಿಸಿ ನಿಮ್ಮ ಆರ್ಥಿಕತೆಯನ್ನು ಬಲಪಡಿಸಿ, ಸಾಕಾಗುವಷ್ಟು ಹಣ ತಂದುಕೊಡುತ್ತಾನೆ. ಅಷ್ಟಮ ಗುರುವಿಗೆ ನಂಜನಗೂಡಿನ ಹಾಲಾಹಲ ಕೂಡಿದ ನಂಜುಂಡೇಶ್ವರನ ದರ್ಶನ ಮಾಡಿ, ತುಲಾಭಾರ ರೂಪದಲ್ಲಿ ಬೆಲ್ಲವನ್ನು ದಾನ ಮಾಡಿ. ಈಶ್ವರನನ್ನು ಪೂಜಿಸಿ ಬನ್ನಿ. ಒಳ್ಳೆಯ ಫಲ ಅನುಭವಿಸಿ.

ತುಲಾ ರಾಶಿ

ಕಳೆದ ವಾರ ನಿಮಗೆ ಶುಭ, ಸಂತೋಷದ ವಾರ್ತೆಯು ಬಂದು ನಿಮ್ಮ ಕೀರ್ತಿ ವೃದ್ಧಿಸುವ ಸಮಯ ಬಂದಿದೆ. ಈ ವಾರವೂ ಅದೇ ಪಥದಲ್ಲಿ ಸಾಗಿ ಊರೂರು ಸುತ್ತಿ ಶರೀರಕ್ಕೆ ಆಯಾಸ ಆಗದಂತೆ ನಡೆದುಕೊಳ್ಳಿ. ಮನುಷ್ಯನ ದುಡಿಮೆಗೆ ಕಡಿವಾಣ ಇರಬೇಕು. ಧನಕ್ಕೆ ಕೊರತೆ ಇರಬಾರದು. ಅನ್ಯ ಮಾರ್ಗದಲ್ಲಿ ಬಂದ ಹಣ ಸ್ವೀಕರಿಸಬಾರದು. ಅವಶ್ಯಕತೆ ಇದ್ದಷ್ಟು ಹಣ ವೆಚ್ಚ ಮಾಡಿ, ಮತ್ತಷ್ಟನ್ನು ದಾನ ಮಾಡಿದರೆ ದೈವವೇ ಕಾಯುತ್ತದೆ. 9 ದಿನ ಲಲಿತಾ ತ್ರಿಶತಿ ಪಾರಾಯಣ ಮಾಡಿ. ಚಂಡಿಕಾ ಅಷ್ಟೋತ್ತರ ಪಠಿಸಿ.

ವೃಶ್ಚಿಕ ರಾಶಿ

ಸಮುದ್ರದ ನೀರು ತೆಗೆಯಲು ಯಾವ ಪಾತ್ರೆ ಸಾಲದು. ನಿಮ್ಮ ಖರ್ಚು ವೆಚ್ಚ ನಿಭಾಯಿಸಲು ಯಾವ ಪಾತ್ರೆ ಇಟ್ಟರೂ ಧನ ತುಂಬದು. ನಿಮಗೆ ಹೆಚ್ಚಿನ ಧನ ಲಾಭ ಬಂದು ಋಣ ಭಾರ ಇಳಿಸುವ ಸಮಯ ಹತ್ತಿರದಲ್ಲಿ ಇದೆ. ಸುಬ್ರಹ್ಮಣ್ಯನನ್ನು ಅನನ್ಯವಾಗಿ ಪ್ರಾರ್ಥಿಸಿ. ಮಹಾಕಾಳಿ ಮಹಾಲಕ್ಷ್ಮಿ ಮಹಾ ಸರಸ್ವತಿ ಮಧ್ಯ ರೂಪದ ಮಹಾಲಕ್ಷ್ಮಿಯನ್ನು ಚಂಡಿಕಾ ರೂಪದಲ್ಲಿ ಪೂಜೆ ಮಾಡಿದರೆ ಧನವು ಬಂದು ಸೇರುತ್ತದೆ.

ಧನುರ್ ರಾಶಿ

ಧನುರ್ ರಾಶಿಗೆ ಗುರುವು ಪಂಚಮದಲ್ಲಿ ರಾಹು ಜತೆ ಇರುವುದರಿಂದ ಕೆಲಸದಲ್ಲಿ ಅಡ್ಡಿ ಆತಂಕ ಬರಬಹುದು. ರಾಹುವು ಮೀನಕ್ಕೆ ಬಂದಾಗ ಗುರು ಮುಂದಕ್ಕೆ ನಿಮ್ಮನ್ನು ನಡೆಸಲು ನಿಮ್ಮ ಸಮಯಕ್ಕೆ ಕಾಯಬೇಕು. ನೀವು ಮಾಡಿದ ಜನ್ಮ ಜನ್ಮಾಂತರದ ಪುಣ್ಯಗಳ ಜತೆ ನಿಮ್ಮ ಮಾತಾ ಪಿತೃಗಳು ಮಾಡಿದ ಪುಣ್ಯ, ಅನುಗ್ರಹ ಬಂದು ಸೇರಿದರೆ ಹಿಂದೂ ಮಹಾಸಾಗರದಲ್ಲಿ ಈಜಿ ಮುಂದೆ ಸಾಗಬಹುದು. ಪಿತೃ ದೇವತೆಗಳನ್ನು ಮರೆಯದಿರಿ. ದೇವಿಯ ನಾಮ ನಿಮ್ಮ ನಾಲಿಗೆ ಮೇಲೆ ಹರಿಯಲಿ. ಚಂಡಿಕಾ ಪಾರಾಯಣ ಮಾಡಿ.

ಮಕರ ರಾಶಿ

ಮಕರ ರಾಶಿ ಅಧಿಪತಿ ಶನಿ. ಮಕರ ರಾಶಿಗೆ ಶನಿ ಸಂಪರ್ಕ ಇದ್ದರೂ, ಗಾಳಿ ಬೀಸದಿದ್ದರೆ ಮನುಷ್ಯನು ಜೀವಿಸಲಾಗುವುದಿಲ್ಲ. ದೇವತಾ ಸ್ವರೂಪದಲ್ಲಿ ಸೃಷ್ಟಿಸಿರುವ ವಾಯುಪುತ್ರ ಹನುಮಂತನನ್ನು ಪೂಜಿಸಿ. ಪಚ್ಚಬಾಳೆ ಹಣ್ಣಿನ ಬೆಲ್ಲ ಮಿಶ್ರಣ ಮಾಡಿ ತುಪ್ಪ ಹಾಕಿ ರಸಾಯನ ಮಾಡಿ ಇಟ್ಟರೆ, ಪ್ರಾಣ ದೇವರ ಪಂಚಾಮೃತ ದೃಷ್ಟಿಯೇ ನಿಮ್ಮ ಮೇಲೆ ಬೀಳುವುದು.

ಕುಂಭ ರಾಶಿ

ಕಂಬವು ಆಧಾರ ಸ್ತಂಭ. ಕುಂಭ ಅಮೃತ ಕಲಶದಂತೆ. ನಾವು ವಸ್ತುಗಳನ್ನು ಉಪಯೋಗಿಸುವಾಗ ಅದು ನ್ಯಾಯಸಮ್ಮತವಾಗಿರಬೇಕು. ನಿಮ್ಮ ಕೆಲಸಗಳ ಮಾರ್ಗ ಮಧ್ಯದಲ್ಲಿ ದೇವರನ್ನು ನೆನಸಿ. 12ರ ಶನಿಯು ಉಪಕಾರ ಮಾಡದಿದ್ದರೂ ಉಪದ್ರವ ಕೊಡುವುದಿಲ್ಲ. ಈ ಸಮಯದಲ್ಲಿ ನಿಮಗೆ ಜನ್ಮ ಕೊಟ್ಟವರಿಗೆ ಯಾವ ದುಃಖ ಕೊಡದೆ, ದಾರಿದ್ರ್ಯ ದುಃಖ ದಹನಾಯ ಎಂದು ಶಿವ ಸ್ತೋತ್ರ ಪಾರಾಯಣ ಮಾಡಿ. ಕಷ್ಟ ನಷ್ಟ ಇಲ್ಲದೆ ಜೀವನಕ್ಕೆ ದಾರಿ ತೋರುತ್ತಾನೆ. ದತ್ತಾತ್ರೇಯ ಗುರು ಚರಿತ್ರೆಯ 12ನೇ ಅಧ್ಯಾಯ ಪಾರಾಯಣ ಮಾಡಿ.

ಮೀನ ರಾಶಿ

ಮನುಷ್ಯನಿಗೆ ದಾರಿ ತೋರಿಸಿ ದಾರಿ ಹೇಳಬಹುದು. ಹೇಳಿದ್ದನ್ನು ಕೇಳಿದ್ದಾದ್ದರೆ, ಗುರು ಮಾತಿನಲ್ಲಿ ವಿಶ್ವಾಸ ಇದ್ದರೆ ದಾರಿಗಳು ಅಷ್ಟಾವಕ್ರ ಇದ್ದರೂ ಸುಖದ ಹಾದಿ ಸಿಗುತ್ತದೆ. ಮೀನ ರಾಶಿಯವರು ಯಾರನ್ನೂ ನಂಬುವವರಲ್ಲ. ಅವರದೇ ಆದ ತತ್ವಗಳಂತೆ ನಡೆಯುವವರೂ ಅಲ್ಲ. ಹೇಳಿದ ಮಾತು ಕೇಳುವುದೂ ಇಲ್ಲ. ಶನಿ ದ್ವಾದಶದಲ್ಲಿ ಇರುವುದರಿಂದ ದೈವ ಪಥದಲ್ಲಿ ಸಾಗಿ. ಶನಿ ಪ್ರದೋಷದ ಕಥೆಯನ್ನು ಪಾರಾಯಣ ಮಾಡಿ. ಪ್ರಾತಃಕಾಲದಲ್ಲಿ ಶಿವ ಅಷ್ಟೋತ್ತರ ಪಾರಾಯಣ ಮಾಡಿದರೆ ಶಿವನೇ ನಿಮ್ಮ ನಮ್ರತೆಯನ್ನು ಮೆಚ್ಚಿ ವರ ಕೊಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net