ವಾರ ಭವಿಷ್ಯ: ಈ ರಾಶಿಯವರಿಗೆ ಏಪ್ರಿಲ್ ತಿಂಗಳವರೆಗೂ ಗುರು ಏಕಾದಶದಲ್ಲಿ ಇದ್ದು ಸಾಕಷ್ಟು ಕೆಲಸಗಳನ್ನು ಜಯಿಸಬಹುದು

Vaara-Bhavishya
Published on

ಮೇಷ: ಈ ರಾಶಿಗೆ ಏಕಾದಶದಲ್ಲಿ ಶನಿ ಇನ್ನೆರಡು ವಾರಗಳಲ್ಲಿ ಬರಲಿದ್ದು ಉತ್ತಮವಾದ ಸತ್ಯನಿಷ್ಠೆ ಉಳ್ಳ ಜೀವನ, ಮತ್ತೊಬ್ಬರಿಗೆ ಉಪಕಾರ ಮಾಡುವ ಮನಸ್ಸು, ದೇವರು, ಗುರುಗಳಲ್ಲಿ ದೃಢ ಭಕ್ತಿ ಇದ್ದರೆ ಆಕಾಶವನ್ನೇ ಮುಟ್ಟಬಹುದು. ದ್ವಾದಶದಲ್ಲಿ ಗುರು ಇದ್ದಾನೆ. ನಡೆ ನುಡಿಯಲ್ಲಿ ಎಚ್ಚರವಿರಲಿ. ಸುಬ್ರಹ್ಮಣ್ಯ ದೇವರ ಧ್ಯಾನ ಸದಾ ಇರಲಿ. ಗುರುಚರಿತ್ರೆಯ 14ನೆ ಅಧ್ಯಾಯ ಪಾರಾಯಣ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.

ವೃಷಭ: ಏಪ್ರಿಲ್ ತಿಂಗಳವರೆಗೂ ಗುರು ಏಕಾದಶದಲ್ಲಿ ಇದ್ದು ಸಾಕಷ್ಟು ಕೆಲಸಗಳನ್ನು ಜಯಿಸಬಹುದು. ಮತ್ತೊಬ್ಬರಿಗೆ ಶ್ರೇಯಸ್ಸು ಉಂಟುಮಾಡುವ ಕೆಲಸ ಮಾಡಬಹುದು. ‘ದುಃಖಂ ಹರತಿ ದುರ್ಗಾ’ ಎನ್ನುವ ಮಂತ್ರವನ್ನು ಜಪಿಸುತ್ತ ಸದಾ ಕಾಲ ದುರ್ಗೆಯನ್ನು ಪೂಜಿಸಿ. ಒಳ್ಳೆಯ ಆರೋಗ್ಯವೂ ನಿಮ್ಮನ್ನು ಕೂಡಿಕೊಂಡು ಬರುವುದರಿಂದ ಶರೀರವನ್ನು ಉತ್ತಮವಾಗಿರಿಸಿಕೊಂಡು ಮುಂದೆ ಸಾಗಿರಿ.

ಮಿಥುನ: ಈ ರಾಶಿಯವರಿಗೆ ಮಿಥುನದಲ್ಲಿ ಬುಧ-ರವಿ ಒಟ್ಟಿಗೆ ಇದ್ದು, ಏಪ್ರಿಲ್ 21ರ ನಂತರ ಗುರು ಅಷ್ಟಮಕ್ಕೆ ಬರುತ್ತಾನೆ. ಶನಿ ನವಮಕ್ಕೆ ಬಂದು ಸೇರಿದರೆ ನಿಮ್ಮ ಪೂರ್ವಪುಣ್ಯದಿಂದ ಮಾಡುವ ಕೆಲಸ ವನ್ನು ಜಯದ ಹಾದಿಗೆ ಕೊಂಡೊಯ್ಯು ತ್ತಾನೆ. ಸ್ವಾರ್ಥ ಬಿಟ್ಟು ನಿಮ್ಮನ್ನು ನಂಬಿರುವವರಿಗೆ ನೆರವಾಗಿ. ದೃಢ ಸಂಕಲ್ಪವಿದ್ದರೆ ವಿಶ್ವವನ್ನು ಕಾಯುವ ಮಹಾಸಂಕಲ್ಪವನ್ನು ಮಾಡಿರುವ ಮಹಾವಿಷ್ಣುವೇ ನಿಮ್ಮನ್ನು ಕಾಯುತ್ತಾನೆ. ನಿತ್ಯವು ಶಿವನಿಗೆ ಬಿಲ್ವಪತ್ರೆಯಿಂದ ಪೂಜಿಸಿ.

ಕಟಕ: ಜನಕ ಮಹಾರಾಜನು ಭೂಮಿಯಲ್ಲಿ ಸಿಕ್ಕ ಹೆಣ್ಣನ್ನು ಕಾಪಾಡಿ ಮುಂದೆ ಶಿವ ಧನಸ್ಸು ಮುರಿದವನಿಗೆ ಕನ್ಯಾದಾನ ಮಾಡಿದನು. ಅಂದರೆ ಮತ್ತೆ ವಿಷ್ಣು ಮತ್ತು ಲಕ್ಷ್ಮಿಯನ್ನು ಒಂದುಗೂಡಿಸಿ ಲೋಕಕ್ಕೆ ಉಪಕಾರ ಮಾಡಿರುತ್ತಾನೆ. ಯಾರನ್ನೂ ಬೇರ್ಪಡಿಸದೆ ಒಂದುಗೂಡಿಸುವ ಪುಣ್ಯ ಸಂಪಾದಿಸಿಕೊಳ್ಳಿ. ಚಂದನದಂತಹ ಮನಸ್ಸನ್ನು ಇಟ್ಟುಕೊಂಡು ಸಂತೋಷದಿಂದ ನಡೆದರೆ ಎಲ್ಲವನ್ನೂ ಜಯಿಸ ಬಹುದು. ಶಿವನ ದಾರಿದ್ರ್ಯಹರಣ ಸ್ತೋತ್ರ ಪಠಿಸಿ. ಶಿವಪಂಚಾಕ್ಷರಿ ಜಪಿಸಿ.

ಸಿಂಹ: ಸಿಂಹದಂತೆ ರಾಜಾರೋಷವಾಗಿ ಜೀವನ ನಡೆಸಿ. ಸತ್ಯದ ಬಾಳು, ಉತ್ತಮ ಧ್ಯೇಯ ದೇವತಾ ಸ್ಮರಣೆ ನಿಮ್ಮದಾಗಿರಲಿ. ಆರೋಗ್ಯವು ಉತ್ತಮವಾಗಿದ್ದು, ಏಪ್ರಿಲ್ ನಂತರದಲ್ಲಿ ಗುರುವು ಸಪ್ತಮಕ್ಕೆ ಬರಲಿದ್ದು ಶುಭ ಉಂಟು ಮಾಡಿ ಕೀರ್ತಿವಂತರನ್ನಾಗಿ ಮಾಡುತ್ತಾನೆ. ಆದಿತ್ಯಹೃದಯ ಪಾರಾಯಣ ಮಾಡಿ. ಸೂರ್ಯ ನಮಸ್ಕಾರ ಮಾಡಿ.

ಕನ್ಯಾ: ಕತ್ತಲು ಸರಿದು ಬೆಳಕು ಬರುವುದು ಸಹಜ. ಪಂಚಮ ಶನಿಯು ಷಷ್ಠಕ್ಕೆ ಬಂದು ನಿಮ್ಮ ದುಃಖ ದೂರ ಮಾಡಿ ದಾರಿದ್ರ್ಯ ಶಮನ ಮಾಡಿ ಎಲ್ಲವೂ ಜಯವಾಗುವಂತೆ ಮಾಡುತ್ತಾನೆ. ಏಪ್ರಿಲ್​ನಲ್ಲಿ ಗುರುವು ಅಷ್ಟಮಕ್ಕೆ ಬರಲಿದ್ದು, ಮೃತ್ಯುಂಜಯ ಜಪ ಮಾಡಿ. ಶಕ್ತಿ ಇದ್ದಲ್ಲಿ ಮೃತ್ಯುಂಜಯ ಹವನ ಮಾಡಿಸಿ. ಶರೀರಧರ್ಮ ಪಾಲಿಸಿ ಜೋಪಾನ ಮಾಡಿಕೊಳ್ಳಿ.

ತುಲಾ: ಈ ರಾಶಿಯ ತಕ್ಕಡಿಯ ಚಿಹ್ನೆಯು ಸಮತೋಲನದ ಭಾಗ. ಅದನ್ನು ಅರಿತು ಸಂಸ್ಕಾರವಂತರಾಗಿ ಬಾಳಿದರೆ ಏನನ್ನೂ ಜಯಿಸಬಹುದು. ಒಂದು ಒಳ್ಳೆಯ ಘಟನೆ ನಡೆದು ನಿಮ್ಮಭಾಗ್ಯದ ಬಾಗಿಲು ತೆರೆದು, ಒಳ್ಳೆಯ ಸಮಾಚಾರವನ್ನು ಕೇಳುತ್ತೀರಿ. ದುಪ್ಪಟ್ಟು ಹಣ ಬಂದು, ಅನ್ಯರ ದುಃಖ ನಿವಾರಿಸುವ ಶಕ್ತಿ ನಿಮ್ಮದಾಗುತ್ತದೆ. ನಿತ್ಯ ತುಳಸಿ ಪೂಜೆ ಮಾಡಿದರೆ ಪತಿವ್ರತೆಯಾದ ಅಹಲ್ಯೆಗೆ ನೀಡಿದಂತೆ ಶ್ರೀರಾಮಚಂದ್ರನೇ ದರ್ಶನ ಕೊಡುತ್ತಾನೆ.

ವೃಶ್ಚಿಕ: ಯಾರನ್ನೂ ಚೇಳಿನಂತೆ ಕುಟುಕಬಾರದು. ಚೇಳನ್ನು ಲಕ್ಷ್ಮಿ ಎಂದು ಭಾವಿಸಿ ಪೂಜಿಸುವವರೂ ಇದ್ದಾರೆ. ಯಾರೂ ಪೂರ್ತಿ ಕೆಟ್ಟವರೂ ಅಲ್ಲ, ಪೂರ್ತಿ ಒಳ್ಳೆಯವರೂ ಅಲ್ಲ. ಕಷ್ಟ ಬಂದಾಗ ಎಲ್ಲರೂ ಕೆಟ್ಟವರಂತೆ ಕಾಣುತ್ತಾರೆ. ಆದರೆ ಎಲ್ಲವೂ ಸಿಕ್ಕಾಗ ಎಲ್ಲರೂ ಒಳ್ಳೆಯವರಾಗಿರುತ್ತಾರೆ. ಒಳ್ಳೆಯವರು ಕೆಟ್ಟವರು ಎನ್ನುವ ತರ್ಕವನ್ನು ಬಿಟ್ಟು ಬಾಳಿದರೆ, ಋಣಮುಕ್ತರಾಗಿ ನಿಮಗೆ ಬರಬೇಕಾದ ದುಡ್ಡು ಪಡೆದು ಶ್ರೇಯೋವಂತರಾಗಿ ಬದುಕುವ ಕಾಲ. ಗಣೇಶನನ್ನು ಧ್ಯಾನಿಸಿ ಸುಬ್ರಹ್ಮಣ್ಯನನ್ನು ನಿಮ್ಮ ಆತ್ಮಮಂದಿರದಲ್ಲಿ ಇರಿಸಿ ಸದಾ ಪೂಜಿಸಿ.

ಧನುಸ್ಸು: ಪ್ರಯತ್ನ ಇದ್ದರೆ ಸಾಲದು ಅದೃಷ್ಟವೂ ನಿಮ್ಮ ಕೈ ಹಿಡಿಯಬೇಕು. ದೇವರ ಮೊರೆ ಹೋಗಿ. ಸಾಕ್ಷಾತ್ ಶ್ರೀರಾಮಚಂದ್ರನು ದಶರಥ ಮಹಾರಾಜನ ಮಗನಾಗಿ ಅವನ ಪಾದ ಮುಟ್ಟಿ ನಮಸ್ಕರಿಸಿ ಭರತಖಂಡವನ್ನೇ ಆಳಿದ್ದಾನೆ. ಅವನು ಮಾಡಿದ ಕೆಲಸವನ್ನು ನೀವು ಮಾಡಿದರೆ, ಪಾಳೇಗಾರನಾಗಿ, ಚಕ್ರವರ್ತಿಯಾಗಿ ಬಾಳುವ ಅದೃಷ್ಟ ನಿಮ್ಮದಾಗಲಿದೆ. ಕೇವಲ 17 ದಿನಗಳು ಸಾಕು ಒಳ್ಳೆಯ ಸಮಯ ನಿಮ್ಮನ್ನು ಅರಸಿಕೊಂಡು ಬರಲಿದೆ. ಕುಲಗುರುಗಳ ಸ್ಮರಣೆ ಮಾಡಿರಿ. ದೇವರು ಆಯುಷ್ಯ ಕೊಟ್ಟಷ್ಟು ಕಾಲವೂ ಗುರುಚರಿತ್ರೆ ಪಾರಾಯಣ ಮಾಡಿ. ದತ್ತನೇ ನಿಮ್ಮ ಹೃದಯಮಂದಿರದಲ್ಲಿ ನೆಲೆಸುತ್ತಾನೆ

ಮಕರ: ಈ ರಾಶಿಯವರಿಗೆ ಜನ್ಮಶನಿ ಮುಂದೆ ಸರಿದು ಕುಂಭಕ್ಕೆ ಬರುತ್ತಾನೆ. ಮೂರರಲ್ಲಿ ಗುರುವಿರುವುದು ದುಃಖ ಸರಿದು ಒಳ್ಳೆಯದನ್ನು ಪಡೆಯುವ ಕಾಲ. ಸಚ್ಚಿಂತನೆ ಇದ್ದಲ್ಲಿ ಎಂಥ ಭವಸಾಗರವನ್ನೂ ದಾಟಬಹುದು. ಶನಿ ಸಂಚಾರ ಮುಗಿಯುವವರೆಗೂ, ಹನುಮಂತನಿಗೆ ಕಡಲೆಕಾಯಿ ಬೆಲ್ಲ ಬಾಳೆಹಣ್ಣು ಕೊಡಿ. ಹನುಮಾನ್ ಅಷ್ಟೋತ್ತರ ಪಾರಾಯಣ ಮಾಡಿ

ಕುಂಭ: ಲಗ್ನಕ್ಕೆ ಎರಡರಲ್ಲಿ ಗುರು ಇದ್ದಾನೆ. ಆದರೆ ಶನಿಯಿಂದ ಕೆಲವೊಂದು ಈಡೇರಬೇಕಾದ ಕೆಲಸಗಳಿಗೆ ಕಾಯಬೇಕಾಗುತ್ತದೆ. ಶನಿ ಸಂಚಾರದಲ್ಲಿ ಎಲ್ಲವನ್ನೂ ಪಡೆಯುತ್ತೀರಿ. ಗುರು ಒಬ್ಬನೇ ಸಾಕು, ನೀವು ಧೈರ್ಯ ಯಶಸ್ಸು ಕೀರ್ತಿಯನ್ನು ಪಡೆಯಲು. ಶನಿ ಸ್ತೋತ್ರ ಪಾರಾಯಣ ಮಾಡಿ. 5 ಸೋಮವಾರ ಈಶ್ವರನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ. ಈಶ್ವರನಿಗೆ ಬಿಲ್ವಪತ್ರೆಯಿಂದ ಪೂಜಿಸಿ. ಅನುಷ್ಠಾನ ಉಳ್ಳ ಬ್ರಾಹ್ಮಣನಿಗೆ ಬಿಳಿಯ ವಸ್ತ್ರವನ್ನು ದಾನ ಕೊಡಿ.

ಮೀನ: ಈಶ್ವರನು ಮೃತ್ಯುಂಜಯ ಸ್ವರೂಪನು. ದೇವರ ಮಹಾದೇವ ಗಿರಿಜಾರಮಣನಾದ ಈಶ್ವರನನ್ನು ಗುರು ರಾಶಿಯಲ್ಲಿ ಹುಟ್ಟಿದವರು ಎಷ್ಟು ಆರಾಧನೆ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ದುಃಖ ದೂರವಾಗಿ ಕಾರ್ಯರಂಗದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯಾರ ಮನಸ್ಸನ್ನೂ ನೋಯಿಸಬೇಡಿ. ಇದೇ ನಿಮ್ಮ ಸುಖಜೀವನದ ಪಾಠವಾಗಿರಲಿ. ಗುರುಚರಿತ್ರೆಯ 5ನೇ ಅಧ್ಯಾಯ ಪಾರಾಯಣ ಮಾಡಿ. ದತ್ತನ ಜನನವು ಎಲ್ಲಿ ಆಯಿತು, ನಾಮಸ್ಮರಣೆಯಿಂದ ಅವನು ಏನೇನೆಲ್ಲಾ ಕೊಡುತ್ತಾನೆ ಎಂಬುದನ್ನು ತಿಳಿದು ಸದಾ ಗುರುದತ್ತಾತ್ರೇಯನನ್ನು ಧ್ಯಾನಿಸಿ ಪೂಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net