ಈ ರಾಶಿಯವರು ಯಾವುದಕ್ಕೂ ಆಲಸ್ಯ ಪಡದೆ ವೇಗದಲ್ಲಿ ನೀವು ಸಾಗಬೇಕು: ವಾರಭವಿಷ್ಯ

VARA BHAVISHYA
Published on
ಮೇಷ ರಾಶಿ

ಪಿತೃ ದೇವರನ್ನು ತೃಪ್ತಿಪಡಿಸುವ ಹಾಗೂ ಪಿತೃಗಳು ವಂಶೋದ್ಧಾರವಾಗಲಿ ಎಂದು ಹರಸುವ ಪಿತೃ ಮಾಸವಾದ ಕನ್ಯಾ ಮಾಸದ ಕಡೆಯ ಭಾಗಕ್ಕೆ ಬಂದಿದ್ದೇವೆ. 18ನೇ ತಾರೀಖಿನಿಂದ ತುಲಾ ಮಾಸವು ಪ್ರಾರಂಭವಾಗಲಿದೆ .ಈ ಮಾಸದಲ್ಲಿ ತೀರ್ಥಕ್ಷೇತ್ರಗಳ ದರ್ಶನ ಮಾಡಿದರೆ ಒಳ್ಳೆಯ ಫಲಗಳು ಲಭಿಸುತ್ತದೆ . ರಾಹುವು ಮೇಷ ರಾಶಿಯಿಂದ ನಿರ್ಗಮನವಾಗಿ ಗುರು ಸ್ವತಂತ್ರನಾದಾಗ ಅದರಲ್ಲೂ ಮೇ 1ರಿಂದ ನೀವು ಇಚ್ಛಿಸಿದ ಫಲಗಳು ಸಿಗುತ್ತವೆ. ಸುಬ್ರಹ್ಮಣ್ಯನ ಪ್ರಾರ್ಥನೆ ಇರಲಿ. ನಿಧಾನವಾಗಿ ಚಲಿಸಿ. ಅರ್ಧಕ್ಕೆ ನಿಂತ ಕಾರ್ಯಗಳು ಮುಂದೆ ಸಾಗಲಿವೆ.

ವೃಷಭ ರಾಶಿ

ಆನಂದ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಎಲ್ಲವೂ ನನಗೆ ಬೇಕು ಎಂಬ ಬಯಕೆಗಳಿಗೆ ಕಡಿವಾಣ ಹಾಕಿದರೆ ದೇವರು ನಿಮಗೆ ಬಿಟ್ಟು ಹೋದ ಆಸ್ತಿಪಾಸ್ತಿ, ಅಗತ್ಯವಾದ ಧನವನ್ನು ಸಂಪಾದಿಸಿ ಕೊಟ್ಟು ನಿಮ್ಮನ್ನು ಬಲಾಢ್ಯನನ್ನಾಗಿ ಮಾಡುತ್ತಾನೆ. ಆನಂದದಿಂದ ಇದ್ದರೆ ಮನುಷ್ಯನು ಏನನ್ನಾದರೂ ಸಾಧಿಸಬಹುದು. ದ್ವಾದಶದಲ್ಲಿ ಗುರು, ರಾಹು ಸಂಪರ್ಕದಲ್ಲಿದ್ದು ಅಕ್ಟೋಬರ್ 30ರ ನಂತರ ರಾಹುವು ಮೀನ ರಾಶಿಗೆ ಬಂದಾಗ ಅಲ್ಪ ಏಳಿಗೆ ನೀಡಿದರೂ ಲಗ್ನಕ್ಕೆ ಗುರು ಬಂದ ನಂತರ ನೀವು ಕಾರ್ಯೋನ್ಮುಮುಖವಾದರೆ ಗೆಲುವನ್ನು ಸಾಧಿಸಬಹುದು.

ಕಟಕ ರಾಶಿ

ಆಲಸ್ಯಂ ಅಮೃತಂ ವಿಷಂ ಎಂಬಂತೆ ಕಟಕ ರಾಶಿಯವರು ಯಾವುದಕ್ಕೂ ಆಲಸ್ಯ ಪಡದೆ ನಿಮ್ಮ ವೇಗದಲ್ಲಿ ನೀವು ಸಾಗಬೇಕು. ಕೆಲವೊಂದು ಶಾರೀರಿಕ ಭಾದೆ ನಿಮ್ಮ ವೇಗಕ್ಕೆ ಕಡಿವಾಣ ಹಾಕಿದರೂ ಸಂಯಮದಿಂದ ನಿಮ್ಮ ದೇಹ ಸ್ಥಿತಿಯನ್ನು, ಮನಸ್ಥಿತಿಯನ್ನು ಅರಿತು ಮುಂದೆ ಹೆಜ್ಜೆ ಹಾಕಿದರೆ ಯಾವ ಆತಂಕ ಇರುವುದಿಲ್ಲ. ಮೇ ಒಂದರ ನಂತರ ಗುರುವು ವೃಷಭ ರಾಶಿಗೆ ಬಂದಾಗ ನಿಮ್ಮ ಸಂಕಟಗಳು ನೀಗಿ, ಆರೋಗ್ಯವು ಆನಂದವು ಜೀವನದಲ್ಲಿ ತುಂಬಿರುತ್ತದೆ.

ಮಿಥುನ ರಾಶಿ

ಮಾತುಕೊಟ್ಟರೆ ಅದನ್ನು ನಡೆಸಿಕೊಡುವ ಸಾಮರ್ಥ್ಯ ಹೊಂದಿರಬೇಕು. ಒಡೆದ ಮುತ್ತನ್ನು ಜೋಡಿಸಲು ಆಗುವುದಿಲ್ಲ; ಆಡಿದ ಮಾತನ್ನು ಹಿಂಪಡೆಯುವುದು ಅಸಾಧ್ಯ. ಏಕಾದಶಿಯಲ್ಲಿ ಗುರುವು ರಾಹು ಸಂಪರ್ಕ ಕಳೆದುಕೊಂಡ ನಂತರ ಏಳು ತಿಂಗಳ ಕಾಲ ನೀವು ಜೀವನದಲ್ಲಿ ಏನನ್ನಾದರೂ ಪಡೆಯಬಹುದು. ತಿರುಪತಿ ವೆಂಕಟೇಶ್ವರನನ್ನು ಪೂಜಿಸಿ ಪೌರ್ಣಮಿಯಂದು ಗರುಡವಾಹನ ಸೇವೆಯನ್ನು ನೋಡಿ ಬನ್ನಿ. ತಪ್ಪಿದ ಕೆಲಸಗಳು ಕೈಗೂಡುತ್ತವೆ.

ಸಿಂಹ ರಾಶಿ

ಜೀವನದಲ್ಲಿ ಛಲವೊಂದಿದ್ದರೆ ಸಾಕು, ಗುರಿಯನ್ನು ಮುಟ್ಟಲು ಅದೇ ನಿಮಗೆ ಸಹಾಯ ಮಾಡುತ್ತದೆ. ಇದಕ್ಕೆ ಸಾಕ್ಷಿ ಎಂದರೆ ರಾಮ- ರಾವಣರ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನನ್ನು ಉಳಿಸಲು ಸಂಜೀವಿನಿ ಪರ್ವತವನ್ನೇ ಎತ್ತಿ ತಂದ ವೀರ ಹನುಮ. ಸಿಂಹ ರಾಶಿಯವರು ಬಲಾಢ್ಯರು, ಸಾಹಸಿಯೂ ಹೌದು. ನಿಮ್ಮ ಸಾಹಸ ಹೀಗೆಯೇ ಮುಂದುವರಿಯಲಿ. 9ರ ಗುರು ನಿಮ್ಮ ಕಾರ್ಯಗಳಲ್ಲಿ ಜಯ ತಂದುಕೊಡುತ್ತಾರೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವು ಬರುತ್ತದೆ.

ಕನ್ಯಾ ರಾಶಿ

ನೀವು ಮಾಡಿದ ತಪ್ಪನ್ನು ಅರಿಯುವ ಕಾಲ. ತಪ್ಪು ಅನಿವಾರ್ಯವಾಗಿ ಆಗಿದ್ದರೆ ಪರವಾಗಿಲ್ಲ; ಉದ್ದೇಶಪೂರ್ವಕ ಕೂಡದು. ಕೊಟ್ಟ ಮಾತಂತೆ ನಡೆದು ಋಣ ಬಾಧೆಯನ್ನು ನೀಗಿಸಿಕೊಳ್ಳಿ. ಧನ್ವಂತರಿ ದೇವರನ್ನು ಪ್ರಾರ್ಥಿಸಿ. ಆರೋಗ್ಯಕ್ಕಾಗಿ ಸುಬ್ರಹ್ಮಣ್ಯ ಆರಾಧನೆ ಸದಾ ಇರಲಿ.

ತುಲಾ ರಾಶಿ

ಅದ್ಭುತವೊಂದು ನಡೆದು ನಿಮಗೆ ಅಚ್ಚರಿ ಮೂಡಿಸುತ್ತದೆ. ಅಂದುಕೊಂಡ ಕೆಲಸಗಳು ದಡ ಸೇರುತ್ತವೆ. ನಿಮ್ಮ ಸಾಧನೆಯು ಹೀಗೆಯೇ ಮುಂದುವರಿಯಲು ಶಿವನಿಗೆ ಶರಣಾಗಿ. ಆತಂಕವಿಲ್ಲದ ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಿ. ಕೆಲಸದಲ್ಲಿ ನಿಮಗೆ ಜಯವು ಕಾಣಿಸುತ್ತದೆ. ಮರೆಯದಿರಿ, ಮಕ್ಕಳನ್ನು ದೇವರಂತೆ ಕಾಣಿರಿ. ಪ್ರತಿನಿತ್ಯ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.

ವೃಶ್ಚಿಕ ರಾಶಿ

ನೆಲದಿಂದ ಜಲವನ್ನು ತರಲು ಅದನ್ನು ಹುಡುಕಲು ಅದರಲ್ಲಿ ನುರಿತ ತಜ್ಞರು ವಿಶ್ವದಲ್ಲಿ ಇದ್ದಾರೆ. ನೀರು ಇಲ್ಲದೆ ಇದ್ದರೆ ಮನುಷ್ಯನ ಬಾಳು ಘೊರವಾಗುತ್ತದೆ. ಅದರಂತೆ ಜೇಬಿನಲ್ಲಿ ದುಡ್ಡು ಇಲ್ಲದಿದ್ದರೆ ಕೊಡುವವರಿಗೆ ಕೊಡಲಾಗದಿದ್ದರೆ ವ್ಯಥೆಯು ಕಾಡುತ್ತದೆ. ಹೆದರಬೇಡಿ. ಜಗತ್ತಿನಲ್ಲಿ ಇಲ್ಲ ಎಂಬುದು ಯಾವುದೂ ಇಲ್ಲ. ಸುಬ್ರಹ್ಮಣ್ಯನನ್ನು ಅನಂತವಾಗಿ ಪ್ರಾರ್ಥಿಸಿದರೆ ನಿಮ್ಮ ಜೀವನದಲ್ಲಿ ತಂಪಾದ ಗಾಳಿ ಬಿಸಿ ನಿಮ್ಮ ಆತಂಕಗಳು ದೂರವಾಗುತ್ತವೆ, ಎಚ್ಚರದಿಂದ ಸಾಗಿರಿ. ನಿಮ್ಮ ಕುಲದೇವರನ್ನು ಅರ್ಚಿಸಿ. ನಿಮ್ಮ ಗುರುಗಳ ಮಾತಿಗೆ ಬೆಲೆ ಕೊಟ್ಟು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಧನವು, ಸುಖವು ಲಭಿಸುತ್ತದೆ.

ಧನುರ್ ರಾಶಿ

ಹತ್ತು ಹಲವಾರು ಯೋಜನೆಗಳು ಸಮುದ್ರದ ಅಲೆಗಳಂತೆ ನಿಮ್ಮ ತಲೆಯಲ್ಲಿ ತುಂಬಿ ಹೋಗಿದೆ. ನಿಮಗೆ ಬೇಕಾದ ದಾರಿಯಲ್ಲಿ ಕೆಲಸಗಳು ನಡೆಯದಿದ್ದಾಗ, ಕಷ್ಟವೆಂಬ ಅಲೆಗಳಿಂದ ಕಾಪಾಡುವುದು ದೈವ ಒಂದೇ. ವಿಷಯಗಳನ್ನು ವಿಮಶಿಸಿ ಪರಿಶೀಲಿಸಿ ಮುಂದೆ ನಡೆದರೆ ನೀವು ಉಳಿದ ಕೆಲಸಗಳಲ್ಲಿ ಜಯಭೇರಿ ಬಾರಿಸಬಹುದು . ಶನಿಯ ವಕ್ರತ್ವ ಹೋದ ನಂತರ ನಿಮ್ಮ ಜೀವನದ ಸುವರ್ಣ ಕಾಲವು ಬಂದು ನಿಮ್ಮನ್ನು ದೇವರು ಮುನ್ನಡೆಸುತ್ತಾನೆ.

ಮಕರ ರಾಶಿ

ಉತ್ತರಾಷಾಢ ಶ್ರವಣ ಧನಿಷ್ಠ ನಕ್ಷತ್ರಗಳು ಮಕರ ರಾಶಿಗೆ ಸೇರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಶನಿಯ ಸಂಪರ್ಕದಲ್ಲಿದ್ದಾರೆ. ಶನಿ ಎಂಬುವವನು ಗುರುವೇ. ಅವನು ಕೆಟ್ಟವನಲ್ಲ. ಮಹಾದೇವನ ಸೃಷ್ಟಿ. ಮನುಷ್ಯರಿಗೆ ಪಾಠವನ್ನು ಕಲಿಸಲು ದೇವರು ಶನಿಯ ಸೃಷ್ಟಿ ಮಾಡಿದ್ದಾನೆ. ಬೆಣ್ಣೆಯನ್ನು ಬಿಸಿ ಮಾಡಿದರೆ ಕರಗುತ್ತದೆ. ಹಾಗೆಯೇ ನಿಮ್ಮ ಬುದ್ಧಿಯನ್ನು ಚುರುಕಾಗಿಸಿ ದೈವವನ್ನು ಪ್ರಾರ್ಥಿಸಿ, ನಿಮ್ಮ ಕೆಲಸಗಳಲ್ಲಿ ಮುಂದುವರೆಯಿರಿ. ಮುಂದಿನ ದಿನಗಳಲ್ಲಿ ಶುಭ ಕಾಣಬಹುದು.

ಕುಂಭ ರಾಶಿ

ಮಕರ, ಕುಂಭ ರಾಶಿಗಳ ಅಧಿಪತಿಯು ಶನಿ ಆಗಿದ್ದು, ಕುಂಭ ರಾಶಿಗೆ ಶನಿಯು ಲಗ್ನದಲ್ಲೇ ಇದ್ದಾನೆ. ಕೈಲಾಗದಷ್ಟು ಹೊರೆಯನ್ನು ಹೊತ್ತರೆ ಮೈ ನೋಯುತ್ತದೆ. ಅನ್ಯರಿಗೆ ನೀವು ಹೊರೆಯಾಗದಿರಿ. ನಿಮ್ಮ ಕಾಲ ಮೇಲೆ ನಿಂತು ದೈವ ಬಲದಿಂದ ಮುಂದೆ ಸಾಗಿರಿ. ಪ್ರಸ್ತುತ ಸಮಯವು 50 ಭಾಗ ಶುಭಾಂಶದಿಂದ ಕೂಡಿದೆ. ಕೆಲಸಗಳು ಮಂದಗತಿಯಲ್ಲಿ ಸಾಗಿದರೂ ಪರಿಪೂರ್ಣಗೊಳ್ಳುತ್ತವೆ. ದಕ್ಷಿಣ ಮೂರ್ತಿಯನ್ನು ಶನಿಯನ್ನು ಅರ್ಜಿಸಿ. ಕರಿ ಎಳ್ಳನ್ನು ಬೆಲ್ಲವನ್ನು ದಾನ ಮಾಡಿ. ಶುಭವಾಗಲಿ.

ಮೀನ ರಾಶಿ

ಹನುಮಂತನು ಸೀತಾಮಾತೆಯನ್ನು ಹುಡುಕುವ ಸಮಯದಲ್ಲಿ ತನ್ನ ಪ್ರಭು ಶ್ರೀರಾಮಚಂದ್ರನು ಕೊಟ್ಟ ಕೆಲಸವನ್ನು ವಿಶ್ರಾಂತಿ ಇಲ್ಲದೆ, ಆಹಾರ ನಿದ್ರೆಗಳಿಲ್ಲದೆ ದೃಢವಾದ ಸಂಕಲ್ಪದಿಂದ ಪೂರೈಸುತ್ತಾನೆ. ಸದ್ಯದಲ್ಲಿ ನೀವು ಏಳೂವರೆ ವರ್ಷದ ಶನಿಯ ಸಂಚಾರದಲ್ಲಿ ಇರುವುದರಿಂದ ಹನುಮಂತನಂತೆ ನಿಮ್ಮ ಬಾಳಿನಲ್ಲಿ ನೀವು ದೃಢ ಸಂಕಲ್ಪ ಮಾಡಿ ಕೆಲಸಗಳಲ್ಲಿ ಮುಂದುವರಿಯಬೇಕು. ಸದಾ ರಾಮನನ್ನು ಪ್ರಾರ್ಥಿಸಿ, ಸುಂದರಕಾಂಡ ಪಾರಾಯಣ ಮಾಡಿದ್ದೆ ಆದರೆ ಶ್ರೀರಾಮನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಸುಖವನ್ನು ನೆಮ್ಮದಿಯನ್ನು ಕಂಡುಕೊಳ್ಳುವಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net