ಮದುಮಗಳ ಮನೆ ಹುಡುಕಿಕೊಂಡು ರಾತ್ರಿ ಇಡೀ ಅಲೆದಾಡಿದ ವರ; ಪಾಪ!

Indicative image wedding procession
Published on

ವಾರಾಣಸಿ: ವರ ಮತ್ತು ಆತನ ಬಂಧುಗಳು ಮೆರವಣಿಗೆ ಮೂಲಕ ವಧುವಿನ ಊರಿಗೆ ಆಗಮಿಸಿ, ರಾತ್ರಿ ಇಡೀ ಹುಡುಕಾಡಿದ್ರೂ ಮದುಮಗಳ ಮನೆ ಮಾತ್ರ ಸಿಗಲಿಲ್ಲ! ಸಿಟ್ಟಿಗೆದ್ದ ವರನ ಕಡೆಯವರು ಮದುವೆ ದಲ್ಲಾಳಿ ಮಹಿಳೆಯನ್ನು ಒತ್ತೆ ಇಟ್ಟುಕೊಂಡ್ರು! ಮದುವೆಯೊಂದರ ವಿಲಕ್ಷಣ ಸನ್ನಿವೇಶವಿದು!

ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯ ಕೊತ್ವಾಲಿ ಪಟ್ಟಣದ ಕಾನ್ಶೀರಾಮ್ ಕಾಲನಿಯ ನಿವಾಸಿ ವರ. ಮಾವು ಜಿಲ್ಲೆಯ ರಾಣಿಪುರ ಮದುಮಗಳ ಊರು. ಡಿಸೆಂಬರ್ 11ಕ್ಕೆ ಮದುವೆ ನಿಗದಿಯಾಗಿತ್ತು. ವರ ಮತ್ತು ಆತನ ಕಡೆಯವರು ಡಿಸೆಂಬರ್ 10ರಂದು ಸಂಜೆ ಊರಿಂದ ಮೆರವಣಿಗೆ ಹೊರಟರು. ರಾತ್ರಿ ರಾಣಿಪುರ ತಲುಪಿದ್ರು. ಅಡ್ರೆಸ್​ ಗೊತ್ತಿಲ್ಲದೇ ವಧುವಿನ ಮನೆ ಹುಡುಕಿ ಸುಸ್ತಾಗಿ ವಾಪಸಾದ್ರು.

ಮಾರನೇ ದಿನ ಮದುವೆ ದಲ್ಲಾಳಿ ಮಹಿಳೆಯನ್ನೇ ಒತ್ತೆಯಾಳಾಗಿ ಇರಿಸಿಕೊಂಡ್ರು. ಮಾಹಿತಿ ಪೊಲೀಸರಿಗೆ ತಲುಪಿತು. ವಿಚಾರಣೆ ವೇಳೆ ಬಹಿರಂಗವಾದ ಸುದ್ದಿ ಇಷ್ಟು - ವರನಿಗೆ ಇದು ಎರಡನೇ ಮದುವೆ. ಬಿಹಾರದ ಸಮಷ್ಟಿಪುರದ ನಿವಾಸಿ ಮಹಿಳೆಯನ್ನು ಈಗಾಗಲೇ ಮದುವೆಯಾಗಿದ್ದು, ಆಕೆ ಮದುವೆಯ ಬೆನ್ನಿಗೇ ಸಂಬಂಧ ಕಡಿದುಕೊಂಡು ಒಂಟಿಯಾಗಿ ಜೀವಿಸತೊಡಗಿದ್ದಳು. ಇದಾರ ನಂತರ ಎರಡನೇ ಮದುವೆಗೆ ಮನಸ್ಸು ಮಾಡಿದ ವರ ನರೋಲಿಯ ಅಂಗಡಿಯೊಂದರಲ್ಲಿ ಮರುಮದುವೆಯ ಮಾತುಕತೆ ನಡೆಸಿದ್ರು. ಇದಕ್ಕೆ ದಲ್ಲಾಳಿಯಾಗಿದ್ದು ಒಬ್ಬ ಮಹಿಳೆ. ಅಲ್ಲೇ ಮದುವೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿತ್ತು.

ಮದುವೆ ಖರ್ಚಿಗೆ ಎಂದು ವಧುವಿನ ಕಡೆಯವರು 20,000 ರೂಪಾಯಿ ಪಡೆದುಕೊಂಡಿದ್ರು. ಆದರೆ, ಮದುವೆಗೆ ಮೊದಲು ವರ ಅಥವಾ ಆತನ ಕಡೆಯವರು ಹುಡುಗಿಯ ಮನೆಗೆ ಹೋಗಿರಲಿಲ್ಲ. ಆಕೆ ಹೇಗಿದ್ದಾಳೆ ಎಂದೂ ನೋಡಿರಲಿಲ್ಲ. ಮದುವೆ ಮುನ್ನಾ ದಿನ ತೆರಳಿ ಅವಾಂತರ ಮಾಡಿಕೊಂಡು ಬಂದು ದಲ್ಲಾಳಿ ಮಹಿಳೆಯನ್ನು ಒತ್ತೆಯಾಳಾಗಿ ಇರಿಸಿ ಗದ್ದಲ ಉಂಟು ಮಾಡಿದ್ದರು. ಪೊಲೀಸರ ಮಧ್ಯಪ್ರವೇಶದ ಕಾರಣ ದಲ್ಲಾಳಿ ಮಹಿಳೆ ಬಚಾವ್ ಆಗಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ.. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net