More

    ಬನ್ನಂಜೆ ಕೃತಿ ದ್ವಿಭಾಷೆಯ ಸಂಗಮ: ಸಂಸ್ಕೃತ ಪಾಂಡಿತ್ಯವೂ, ಕನ್ನಡ ಲಾಲಿತ್ಯವೂ…

    |ಗೋಪಾಲಕೃಷ್ಣ ಪಾದೂರು, ಉಡುಪಿ
    ಬನ್ನಂಜೆ ಗೋವಿಂದಾಚಾರ್ಯರು ಸ್ವಾಧ್ಯಾಯದಿಂದ ತುಂಬಿದ ಜ್ಞಾನಭಂಡಾರ. ಸಂಸ್ಕೃತ ಭಾಷೆ ಮೇಲೆ ಎಷ್ಟು ಹಿಡಿತವೋ ಅಷ್ಟೇ ಸೊಬಗು ಕನ್ನಡ. ಪಂಡಿತರೊಂದಿಗೂ ಒಡನಾಟ, ಸಾಹಿತಿಗಳೊಂದಿಗೂ ನಂಟು. ಹೀಗಾಗಿ ಬನ್ನಂಜೆ ಕೃತಿಗಳೆಂದರೆ ಸಂಸ್ಕೃತ- ಕನ್ನಡ ಭಾಷೆಯ ಸಂಗಮ.

    ವೇದಾಂತದ ಗಹನತತ್ತ್ವ, ಮಧ್ವಸಿದ್ಧಾಂತದ ಕಠಿಣ ಪ್ರಮೇಯಗಳು, ರಾಮಾಯಣ, ಭಾಗವತ, ಭಾರತ, ಭಗವದ್ಗೀತೆಗಳ ಪ್ರವಚನ ಆಬಾಲ ವೃದ್ಧರಿಗೂ ಕರ್ಣಾನಂದಕರ. ದ್ವಂದ್ವಕ್ಕೆ ಆಸ್ಪದವೇ ಇಲ್ಲದ ಖಂಡತುಂಡ ನಿರ್ಣಯಗಳು ಯುವಜನರಿಗೂ ಆಪ್ಯಾಯಮಾನವಾಗಿವೆ.

    ಬನ್ನಂಜೆ ಹೊಸತನ್ನು ಹೇಳಲಿಲ್ಲ. ವೇದವ್ಯಾಸರು, ಆಚಾರ್ಯ ಮಧ್ವರು, ವಾಲ್ಮೀಕಿ, ಬಾಣಭಟ್ಟ, ಭವಭೂತಿ, ತ್ರಿವಿಕ್ರಮ ಪಂಡಿತಾಚಾರ್ಯ, ಹರಿದಾಸರ ಹಾಡುಗಳನ್ನು ಜನಮನಕ್ಕೆ ತಲುಪುವಂತೆ ತಿಳಿಸುವ ವಿದ್ವತ್​ಪೂರ್ಣ ಕಲೆ ಅವರಿಗೆ ಕರಗತವಾಗಿತ್ತು. ಆಚಾರ್ಯರು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಲ್ಲ. ಅವರೇ ಬರೆದಂತೆ ಸಂಸ್ಕೃತ ಕನ್ನಡದ ಕನ್ನಡಿಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು. ಇದಕ್ಕೆ ಚಂದದ ಉದಾಹರಣೆಗಳು ಬಾಣಭಟ್ಟನ ಕಾದಂಬರಿ, ಕಾಳಿದಾಸನ ಅಭಿಜ್ಞಾನ ಶಾಕುಂತಲೆ (ಮತ್ತೆ ನೆನಪಾದಳು ಶಕುಂತಲೆ), ಶೂದ್ರಕನ ಮೃಚ್ಛಕಟಿಕ (ಆವೆಯ ಮಣ್ಣಿನ ಆಟದ ಬಂಡಿ), ಭವಭೂತಿಯ ಉತ್ತರ ರಾಮಚರಿತ (ಮತ್ತೆ ರಾಮನ ಕಥೆ) ಕೃತಿಗಳು ಮತ್ತು ಆನಂದ ತೀರ್ಥರ ಪದ್ಯಗಳು. ಸಂಸ್ಕೃತದ ಈ ಮೇರುಕೃತಿಗಳಿಗೆ ಕನ್ನಡದಲ್ಲಿ ಹೊಸಹುಟ್ಟು ನೀಡಿದವರು ಗೋವಿಂದಾಚಾರ್ಯರು. ಬಾಣಭಟ್ಟನ ಕಾದಂಬರಿಗೆ ಮುನ್ನುಡಿ ಬರೆದಿದ್ದ ವರಕವಿ ದ.ರಾ.ಬೇಂದ್ರೆಯವರಿಂದ ‘ನನ್ನ ಕೃತಿಗಳನ್ನು ವಿಮರ್ಶೆಗೊಳಪಡಿಸಲು ನೀನೇ ಸಮರ್ಥ’ ಎಂಬ ಶ್ಲಾಘನೆಗೆ ಪಾತ್ರರಾಗಿದ್ದ ಹೆಗ್ಗಳಿಕೆ ಬನ್ನಂಜೆಯವರದ್ದು. ಕವಿವರ್ಯ ಪುತಿನ ಅವರೂ ಇವರ ಕೃತಿಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

    ದ್ವಾದಶ ಸ್ತೋತ್ರವನ್ನೇ ವಿಶ್ಲೇಷಿಸೋಣ. ಆಚಾರ್ಯ ಮಧ್ವರು ‘ಪ್ರೀಣಯಾಮೋ ವಾಸುದೇವಂ’ ಎಂದು ಹಾಡಿದ್ದರೆ ಬನ್ನಂಜೆಯವರ ಕೈಯಲ್ಲಿ ಅದು ‘ಒಲಿಸುವೆವು ಒಲಿಸುವೆವು ಶ್ರೀವಾಸುದೇವನಂ’ ಎಂಬುದಾಗಿ ಅದೇ ಧಾಟಿಯಲ್ಲಿ ರೂಪಾಂತರಗೊಂಡಿದೆ. ಭಗವದ್ಗೀತೆಯನ್ನು ‘ಭಗವಂತನ ನಲ್ನುಡಿ’ ಎಂಬುದಾಗಿ ಕನ್ನಡಕ್ಕೆ ಅನುವಾದಿಸಿ ಗೀತೆ ಮನಃಶಾಸ್ತ್ರೀಯವಾಗಿ ಹಾಗೂ ಅಧ್ಯಾತ್ಮ ಪರವಾಗಿ ಯಾವ ಬಗೆಯಲ್ಲಿ ಮುಂದೆ ತೆರೆದುಕೊಳ್ಳುತ್ತದೆ ಎಂದು ತೋರಿಸಿದ್ದಾರೆ.

    ಚಲನಚಿತ್ರಗಳಿಗೆ ಸಾಹಿತ್ಯ: ಸಂಸ್ಕೃತದಲ್ಲಿ ಪ್ರಥಮವಾಗಿ ತೆರೆ ಕಂಡಿದ್ದ ಜಿ.ವಿ.ಅಯ್ಯರ್ ಅವರ ಶಂಕರಾಚಾರ್ಯ, ಮಧ್ವಾಚಾರ್ಯ ಮೊದಲಾದ ಚಲನಚಿತ್ರಗಳಿಗೆ ಸಾಹಿತ್ಯ, ಸಂಭಾಷಣೆ ಬರೆದಿದ್ದರು.

    ಕನ್ನಡದಲ್ಲಿ ದೇವರನಾಮ
    ಪ್ರವಚನ, ಭಾಷಾಂತರ, ಕೃತಿ ಸಂಪಾದನೆ ಜತೆಗೆ ಬನ್ನಂಜೆಯವರು ಕನ್ನಡದಲ್ಲಿ 5-6 ಸೊಗಸಾದ ದೇವರನಾಮಗಳನ್ನೂ ಬರೆದಿದ್ದಾರೆ. ‘ಐದು ಕಾಲಿನ ಮಂಚ ಕುಂಟ ಮಲಗಿದ್ದ, ಮೂರು ದಂಟೆಗಳನ್ನು ಬಗಲಿಗೆ ಇರಿಸಿದ್ದ..’ ಎಂದು ಒಗಟಿನ ರೂಪದಲ್ಲಿರುವ ಈ ಹಾಡು ಅಧ್ಯಾತ್ಮದ ಒಳನೋಟವನ್ನು ತೆರೆದಿಡುತ್ತದೆ. ‘ಉಡುಪಿಯ ಕಂಡೀರಾ… ಕೃಷ್ಣನ ಕಂಡೀರಾ…’ ಹಾಡಿನ ಸಾಹಿತ್ಯ ಪ್ರಸಿದ್ಧವಾಗಿದೆ.

    ಪ್ರಶಸ್ತಿ, ಪುರಸ್ಕಾರ
    ಕೃಷ್ಣ ಮಠ ಹಾಗೂ ಅಷ್ಟಮಠ ಸಂಸ್ಥಾನ ಗಳಿಂದ ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ, ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಬಿರುದು ಪ್ರದಾನ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1974), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1989), ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (2001), ಮಂಗ ಳೂರು ವಿವಿ ಗೌರವ ಡಾಕ್ಟರೆಟ್. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2001), ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (2009).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts