ಮಗುವಿನ ಚಿನ್ನದ ಕಾಲ್ಗೆಜ್ಜೆ ಕಳ್ಳನ ಹೊಟ್ಟೆ ಸೇರಿತು- ಮೂರು ವರ್ಷದ ಹಿಂದಿನ ಸಿನಿಮಾ ದೃಶ್ಯ ನೆನಪಿಸಿದ ಕಳ್ಳತನ!

A man swallowed a stolen ornament
Published on

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ಮೂರು ವರ್ಷ ಹಿಂದೆ ಒಂದು ಸಿನಿಮಾ ತೆರೆಕಂಡಿತ್ತು. ಅದರಲ್ಲೊಂದು ದೃಶ್ಯವಿದೆ. ಬಸ್ ಪ್ರಯಾಣ ಮಾಡುತ್ತಿದ್ದ ನಾಯಕಿಯ ಕತ್ತಿನಲ್ಲಿದ್ದ ಸರವನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದಾತ ಆಕೆಯ ಅರಿವಿಗೆ ಬಾರದಂತೆ ಕಟ್​ ಮಾಡಿ ತೆಗೆಯುತ್ತಿದ್ದ. ಆಗ ಎಚ್ಚೆತ್ತ ನಾಯಕಿ ಹಿಂದೆ ತಿರುಗಿ ನೋಡುತ್ತಾಳೆ. ಅಷ್ಟರೊಳಗೆ ಆತ ಆ ಸರವನ್ನು ನುಂಗಿ ಬಿಟ್ಟಿದ್ದ!

ಬಸ್ ಪೊಲೀಸ್ ಠಾಣೆಗೆ ಹೋಯಿತು. ಸರಗಳ್ಳ ಪೊಲೀಸರ ಬಳಿಯೂ ಅದನ್ನೇ ಹೇಳಿದ - ನಾನು ಸರ ಕಳವು ಮಾಡಿಲ್ಲ. ಸಾಕ್ಷಿ ಏನಿದೆ ಎಂದು?. ಆತ ಸರ ನುಂಗುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ನಾಯಕಿ ಪ್ರತಿಪಾದಿಸಿದ ಕಾರಣ, ಪೊಲೀಸರು ಆತನನ್ನು ವಶಕ್ಕೆ ಪಡೆದು ಎಕ್ಸ್​ರೇ ತೆಗೆಸಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಸರ ನುಂಗಿದ್ದರೆ ಮಲವಿಸರ್ಜನೆ ಮಾಡುವಾಗ ಹೊರಬರಲೇ ಬೇಕಲ್ಲ ಎಂದು ಕಾಯುತ್ತಿರುವ ದೃಶ್ಯವದು.. ಅಂದ ಹಾಗೆ ಸಿನಿಮಾದ ಹೆಸರು ತೋಂಡಿಮೊದಲೂಂ ದೃಕ್​ಸಾಕ್ಷಿಯೂಂ.

ಸಿನಿಮಾ ದೃಶ್ಯದ ವಿಷಯ ಹಾಗಿರಲಿ. ಇಂಥದ್ದೇ ಘಟನೆ ನಿಜ ಜೀವನದಲ್ಲೂ ನಡೆದಿದೆ. ತಂಪನೂರು ಪೊಲೀಸ್​ ಠಾಣಾ ವ್ಯಾಪ್ತಿಯ ತಂಪನೂರು ಬಸ್​ನಿಲ್ದಾಣದಲ್ಲಿ ನಡೆದಿರುವ ಕಳವು ಪ್ರಕರಣವಿದು. ಇಲ್ಲಿ ಆರೋಪಿ ಸ್ಥಾನದಲ್ಲಿರುವಾತ ಪೂಂತುರ ಪಳ್ಳಿತೆರವು ನಿವಾಸಿ ಶಫೀಕ್​ (42). ಅಜಿಕುಮಾರ್ ಮತ್ತು ಮಿನಿ ಎಂಬ ಶಿಕ್ಷಕ ದಂಪತಿಯ ಮೂರು ವರ್ಷದ ಪುತ್ರಿ ಧರಿಸಿದ್ದ ಪಾದಸರವನ್ನು ಶಫೀಕ್ ಕಳವುಗೈದು ನುಂಗಿಬಿಟ್ಟಿದ್ದ. 4.5 ಗ್ರಾಂ ತೂಕದ ಚಿನ್ನದ ಪಾದಸರವಾಗಿತ್ತದು.

ಶಫೀಕ್ ಓಡಿ ಹೋಗುವ ಮೊದಲೇ ಹಿಡಿದ ಸ್ಥಳೀಯರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೇಸ್ ದಾಖಲಿಸಿದರು. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಎಕ್ಸ್ ರೇ ತೆಗೆಸಿದಾಗ ಹೊಟ್ಟೆಯಲ್ಲಿ ಪಾದಸರ ಇರುವುದು ದೃಢಪಟ್ಟಿತು. ಕೋರ್ಟ್​ಗೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಹೊಟ್ಟೆಯಿಂದ ಪಾದಸರ ಹೊರಬರುವುದನ್ನು ಪೊಲೀಸರು ಕಾಯುತ್ತಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ.. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net