Web Exclusive|ಆರ್​ಟಿಇ ಸೀಟು ಕೇಳೋರಿಲ್ಲ: ಕೇವಲ ಶೇ.21 ಭರ್ತಿ, ಇನ್ನೂ ಉಳಿದಿವೆ 13 ಸಾವಿರ ಸೀಟು

RTE web exclusive
Published on

| ದೇವರಾಜ್ ಎಲ್. ಬೆಂಗಳೂರು: ಒಂದೆರಡು ವರ್ಷಗಳ ಹಿಂದೆ ಬಹು ಬೇಡಿಕೆಯಲ್ಲಿದ್ದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ಸೀಟುಗಳನ್ನು ಇಂದು ಕೇಳೋರೇ ಇಲ್ಲ! ಸತತ ಎರಡು ಬಾರಿ ಸೀಟು ಹಂಚಿಕೆ ನಡೆಸಿದರೂ ಇನ್ನೂ 13 ಸಾವಿರ ಸೀಟುಗಳು ಖಾಲಿ ಉಳಿದಿವೆ.

ಕಳೆದ 5 ವರ್ಷ ಆರ್​ಟಿಇ ಸೀಟುಗಳ ಮಾಹಿತಿ ವರ್ಷ       ಲಭ್ಯವಿದ್ದ ಸೀಟು    ಪ್ರವೇಶ ಪಡೆದವರು 2020-21              17,453              3,089 2019-20             17,720              4,698 2018-19         1,52,117         1,19,678 2017-18         1,28,648         1,09,001 2016-17         1,15,237           97,991

ಸಾರ್ವಜನಿಕ ಶಿಕ್ಷಣ ಇಲಾಖೆ 2020-21ನೇ ಸಾಲಿನ ಆರ್​ಟಿಇಗೆ ಅರ್ಜಿ ಆಹ್ವಾಸಿದಾಗ 17,453 ಸೀಟುಗಳು ಲಭ್ಯವಿದ್ದವು. ಮೊದಲ ಸುತ್ತಿನಲ್ಲಿ 5,912 ಮತ್ತು ದ್ವಿತೀಯ ಸುತ್ತಿನಲ್ಲಿ 1,441 ಸೀಟುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿತ್ತು. ಈ ಪೈಕಿ ಮೊದಲ ಸುತ್ತಿನಲ್ಲಿ 3,089 ಮತ್ತು ದ್ವಿತೀಯ ಸುತ್ತಿನಲ್ಲಿ 591 ಮಕ್ಕಳು ಪ್ರವೇಶ ಪಡೆದರು. ಒಟ್ಟಾರೆ 13,773 ಸೀಟುಗಳು ಇನ್ನೂ ಖಾಲಿ ಉಳಿದಿವೆ. ಎರಡು ಬಾರಿ ಲಾಟರಿ ಪ್ರಕ್ರಿಯೆ ನಂತರವೂ ಶೇ.79 ಸೀಟುಗಳು ಖಾಲಿ ಉಳಿದಿರುವುದರಿಂದ ಶಿಕ್ಷಣ ಇಲಾಖೆಯು ಮೂರನೇ ಬಾರಿಯ ಪ್ರಕ್ರಿಯೆ ನಡೆಸುವ ಅವಶ್ಯಕತೆ ಇಲ್ಲ ಎಂಬ ತೀರ್ವನಕ್ಕೆ ಬಂದಿದೆ. ಇದನ್ನೂ ಓದಿ: ಮಹಿಳೆಯರಿಗಿದು ಬೊಂಬಾಟ್​ ಸುದ್ದಿ: ಚಿನ್ನಾಭರಣದೊಳಗೆ ಇದು ಇದ್ರೆ ಎಷ್ಟು ಚೆನ್ನ!

ಖಾಸಗಿ ಶಾಲೆಯಲ್ಲಿ ಸೀಟುಗಳನ್ನು ನೀಡಿದ್ದರೆ ಪಾಲಕರು ಹೆಚ್ಚಿಗೆ ಪ್ರವೇಶ ಪಡೆಯುತ್ತಿದ್ದರು. ನಿಯಮ ಬದಲು ಮಾಡಿ ಖಾಸಗಿ ಶಾಲೆಯಲ್ಲೂ ಸೀಟು ನೀಡುವುದು ಉತ್ತಮ | ಬಿ.ಎನ್.ಯೋಗಾನಂದ, ಪ್ರಧಾನ ಕಾರ್ಯದರ್ಶಿ, ಆರ್​ಟಿಇ ಸ್ಟುಡೆಂಟ್ ಆಂಡ್ ಪೇರೆಂಟ್ಸ್ ಅಸೋಷಿಯೇಷನ್

ಸೀಟು ಏಕೆ ಬೇಡ:

ಕಳೆದ ವರ್ಷದಿಂದ ಸರ್ಕಾರಿ ಶಾಲೆಗಳು ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಲ್ಲಿ ಸೀಟು ನೀಡಲಾಗುತ್ತದೆ ಎಂದು ಸರ್ಕಾರ ಹೊಸ ಘೋಷಣೆ ಮಾಡಿದ ಪರಿಣಾಮ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕ್ಷೀಣಿಸಿದೆ. ಎಲ್ಲಿ ಸರ್ಕಾರಿ ಶಾಲೆಗಳು ಇಲ್ಲವೋ ಅಂತಹ ಕಡೆ ಮಾತ್ರ ಖಾಸಗಿ ಶಾಲೆಗಳಲ್ಲಿ ಆರ್​ಟಿಇ ಸೀಟು ಹಂಚಿಕೆ ಮಾಡುತ್ತಿದೆ.

2017-18ರಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸೇರಿ 1,53,117 ಸೀಟುಗಳು ಲಭ್ಯವಿದ್ದವು. ಇದಕ್ಕೆ ನಾಲ್ಕು ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದವು. ಕೊನೆಗೆ 1,19,678 ಸೀಟುಗಳು ಭರ್ತಿಯಾಗಿದ್ದವು. ಮೊದೆಲ್ಲಾ ಆರ್​ಟಿಇ ಸೀಟು ಪಡೆದುಕೊಳ್ಳಲು ಪಾಲಕರು ಇಲ್ಲದ ಸಹಾಸ ಮಾಡುತ್ತಿದ್ದರು. ಕಳೆದ ವರ್ಷದಿಂದ ಲಭ್ಯವಿರುವ ಸೀಟುಗಳನ್ನೇ ತೆಗೆದುಕೊಳ್ಳುವರು ಇಲ್ಲದಂತಾಗಿದೆ. 2019-20ನೇ ಸಾಲಿನಲ್ಲಿ ಲಭ್ಯವಿದ್ದ 17,720 ಸೀಟುಗಳಿಗೆ ಎರಡು ಬಾರಿ ಲಾಟರಿ ಪ್ರಕ್ರಿಯೆ ನಡೆಸಿದರೂ ಭರ್ತಿಯಾದ ಸೀಟುಗಳು ಮಾತ್ರ 4,698. 13,022 ಸೀಟುಗಳು ಹಾಗೇ ಬಾಕಿ ಉಳಿಯಿತು. ಈ ವರ್ಷ ಮತ್ತಷ್ಟು ಹೆಚ್ಚಿನ ಸಂಖ್ಯೆಯ ಸೀಟುಗಳು ಉಳಿಕೆಯಾಗಿವೆ.

ಆರ್​ಟಿಇ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಶುಲ್ಕ ಮರುಪಾವತಿ ಮಾಡಲಿದೆ. ಒಟ್ಟಾರೆ ಈವರೆಗೆ 6,47,878 ವಿದ್ಯಾರ್ಥಿಗಳು ಆರ್​ಟಿಇ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಖಾಸಗಿ ಶಾಲೆಗಳಿಗೆ ಸರ್ಕಾರ 1390.23 ಕೋಟಿ ರೂ. ಶುಲ್ಕ ಮರುಪಾವತಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net