ಈ ಮೈ ಕೊರೆಯುವ ಚಳಿ ರಾಜ್ಯದಲ್ಲಿ ಇನ್ನೆಷ್ಟು ದಿನ?; ಇಲ್ಲಿದೆ ಹವಾಮಾನ ಮುನ್ಸೂಚನೆ..

winter
Published on

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಹೆಚ್ಚಲಿದೆ. ಚಳಿಗಾಲ ಶುರುವಾಗಿ 8 ದಿನ ಕಳೆದಿದ್ದು, ಜನವರಿ 2ನೇ ವಾರದವರೆಗೂ ಚಳಿ ಜಾಸ್ತಿ ಇರಲಿದೆ. ಆನಂತರ ಕಡಿಮೆಯಾಗಲಿದೆ. ಡಿಸೆಂಬರ್ 3ನೇ ವಾರದಲ್ಲಿ ಧಾರವಾಡ 9.4, ಬಾಗಲಕೋಟೆ 10.2, ಬಳ್ಳಾರಿ 10.7, ಬೀದರ್ 10.5 ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನದಲ್ಲಿ 10.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಡಿ.25ರಂದು ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 12-13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಶನಿವಾರ ರಾಜ್ಯದ ಇತರೆ ಜಿಲ್ಲೆಗಳಗಿಂತ ಹಾಸನದಲ್ಲಿ ಕನಿಷ್ಠ ತಾಪಮಾನದಲ್ಲಿ 8.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗಾವಿಯಲ್ಲಿ 12.0, ಬಾಗಲಕೋಟೆಯಲ್ಲಿ 13.0, ರಾಯಚೂರಿನಲ್ಲಿ 12.4, ವಿಜಯಪುರದಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ 4, ರಾಯಚೂರು, ಮೈಸೂರು, ಕಲಬುರಗಿ, ಗದಗ, ಬೀದರ್ ಮತ್ತು ಚಿತ್ರದುರ್ಗದಲ್ಲಿ ಗರಿಷ್ಠ ತಾಪಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.

ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಶುಭ್ರ ವಾತಾವರಣ ಇದ್ದಾಗ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುವ ಸಂದರ್ಭದಲ್ಲಿ ಮತ್ತಷ್ಟು ಕನಿಷ್ಠ ತಾಪಮಾನ ಕುಸಿತವಾಗಲಿದೆ. ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್‌ಗಡದಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕುಸಿತವಾದರೆ ನಮ್ಮ ರಾಜ್ಯದಲ್ಲಿಯೂ ತಾಪಮಾನ ಕುಸಿತವಾಗಲಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಜಾಸ್ತಿ ಚಳಿ ಇರಲಿದೆ. ಉತ್ತರದಿಂದ ದಕ್ಷಿಣ ಕಡೆಗೆ ಬೀಸುವ ಗಾಳಿಯೂ ನೇರವಾಗಿ ಉತ್ತರ ಕರ್ನಾಟಕ ಜಿಲ್ಲೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಚಳಿ ಹೆಚ್ಚಿರಲಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ವ್ಯತ್ಯಾಸವಾದರೆ ಚಳಿಯು ಹೆಚ್ಚಾಗಲಿದೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಜಾಸ್ತಿ ಚಳಿ ಅನುಭವವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net