ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!

omicron
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಜಗತ್ತಿನಲ್ಲಿ ಈಗಾಗಲೇ ಕರೊನಾ ನಾಲ್ಕನೇ ಅಲೆ ಶುರುವಾಗಿದ್ದರೆ, ನಮ್ಮಲ್ಲಿ ಜನರು ಕೋವಿಡ್​ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿರುವ ಸರ್ಕಾರ, ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂಬುದಾಗಿ ಕಿವಿಮಾತನ್ನು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್ ಹಾಗೂ ಐಸಿಎಂಆರ್​ ಡೈರೆಕ್ಟರ್​-ಜನರಲ್ ಡಾ.ಬಲರಾಂ ಭಾರ್ಗವ್​ ಅವರು ಇಂದು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

ಜಗತ್ತು ಈಗಾಗಲೇ ಕರೊನಾ ನಾಲ್ಕನೇ ಅಲೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ವಿಶ್ವದ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ. 6.1ಕ್ಕೆ ತಲುಪಿದೆ. ಈ ಮಧ್ಯೆ ದೇಶದಲ್ಲಿ 358 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಯಾರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಎಲ್ಲರೂ ತಪ್ಪದೆ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

ನ. 26ರ ಬಳಿಕ ಯುರೋಪ್​, ಉತ್ತರ ಅಮೆರಿಕ, ಮತ್ತು ಆಫ್ರಿಕಗಳಲ್ಲಿ ಸೋಂಕಿನ ಪ್ರಮಾಣ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ವಾರಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಇದ್ದರೂ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ.

ಇದರ ಬೆನ್ನಿಗೇ ಗುಜರಾತಿನ 8 ನಗರಗಳಲ್ಲಿ ನಾಳೆಯಿಂದ ನೈಟ್​ ಕರ್ಫ್ಯೂ ವಿಧಿಸಲಾಗುತ್ತಿದ್ದರೆ, ಹರ್ಯಾಣದಲ್ಲಿ ಕೋವಿಡ್​ ಲಸಿಕೆ ತೆಗೆದುಕೊಂಡಿರದಿದ್ದರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಅತ್ತ ಮಹಾರಾಷ್ಟ್ರದಲ್ಲೂ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು, ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಐದಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ನಿರ್ಬಂಧ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net