ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

1208299
Published on

ಬೆಂಗಳೂರು: 'ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..' ಎಂಬ ಗೀತೆ 'ಮಾನಸ ಸರೋವರ' ಸಿನಿಮಾದಲ್ಲಿದೆ. ಅದೇ ಗೀತೆಯ ಸಾಲಿಗೆ ಒಪ್ಪುವಂಥ ಸನ್ನಿವೇಶವೊಂದು ಇಲ್ಲಿದೆ. ಆದರೆ ಇದು 'ಮಾನಸ ಸರೋವರ'ವಲ್ಲ, 'ಭ್ರಷ್ಟಾಚಾರದ ಸಾಗರ'.

ಭ್ರಷ್ಟಾಚಾರದ ಸಾಗರದಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಂಡೇ ನಡೆಸುತ್ತಿದ್ದ ಅವ್ಯವಹಾರ ಇದೀಗ ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕ ಬಯಲಿಗೆ ಬಂದಿದೆ. ಅಂದು ಮಹಿಳಾ ಅಧಿಕಾರಿ ಪಾಲಿಗೆ ವಿಲನ್ ಎಂಬಂತಾಗಿದ್ದ ಆರ್​ಟಿಐ ಕಾರ್ಯಕರ್ತ ಬಳಿಕ ಬಂಧನಕ್ಕೀಡಾಗಿದ್ದ. ಆದರೆ ಅದಾಗಿ ನಾಲ್ಕೇ ದಿನಗಳಲ್ಲಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿ ಅಸಲಿಯತ್ತು ಬಯಲಾಗಿದೆ. ಈಗ ಆಕೆಯೂ ವಿಲನ್​ ಎಂಬ ಅನುಮಾನ ಮೂಡಿದ್ದು, ಆ ಮಹಿಳಾ ಅಧಿಕಾರಿಯೇ ಈ ಕಾರ್ಯಕರ್ತನನ್ನು ಬಲಿಪಶು ಮಾಡಿದಳೇ ಎಂಬ ಶಂಕೆ ಉಂಟಾಗಿದೆ.

ಬೆಂಗಳೂರಿನ ಕತ್ರಿಗುಪ್ಪೆ ವಾರ್ಡ್ ನಂ.163ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಶ್ವೇತಾ ಅವರ ಕಚೇರಿಗೆ ಡಿ. 18ರಂದು ತೆರಳಿದ್ದ ಆರ್​​ಟಿಐ ಕಾರ್ಯಕರ್ತ ಕೃಷ್ಣಮೂರ್ತಿ, ಅಲ್ಲಿ ಆಕೆಯನ್ನು ನಿಂದಿಸಿದ್ದಲ್ಲದೆ, ನೀನು ಸರ್ಕಾರದ ಯಾವ ಡಿಪಾರ್ಟ್​ಮೆಂಟ್​ಗೆ ಹೋದ್ರೂ ಬಿಡಲ್ಲ, ನಿನ್ನನ್ನು ಹೇಗೆ ಕೆಲಸದಿಂದ ತೆಗೆಯಬೇಕು ಎಂದು ಗೊತ್ತಿದೆ ಎಂದು ಬೆದರಿಸಿದ್ದ.

ಅಲ್ಲದೆ ಮಹಿಳಾ ಅಧಿಕಾರಿ ಹೋದಲ್ಲೆಲ್ಲ ಹಿಂಬಾಲಿಸಿ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಶ್ವೇತ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೊಲೀಸರು ಕೃಷ್ಣಮೂರ್ತಿಯನ್ನು ಡಿ.20ರಂದು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್​ಫೋನ್​ ಸಂಭಾಷಣೆಯ ಆಡಿಯೋ ತುಣುಕೊಂದು ಬಹಿರಂಗಗೊಂಡಿದ್ದು, ವೈರಲ್ ಆಗಿದೆ. ಮಾತ್ರವಲ್ಲ, ಶ್ವೇತಾ-ಕೃಷ್ಣಮೂರ್ತಿ ಮಾತನಾಡಿದ್ದಾರೆ ಎನ್ನಲಾದ ಈ ವಿಡಿಯೋ ಈ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ಕೃಷ್ಣಮೂರ್ತಿಗೆ ಶ್ವೇತಾ ಕರೆ ಮಾಡಿ ಸೈಟ್​ ಒಂದರ ಸಂಬಂಧ ಆರ್​ಟಿಐ ಹಾಕಿಸುವಂತೆ ಹೇಳಿರುವುದು ಈ ಆಡಿಯೋದಲ್ಲಿ ದಾಖಲಾಗಿದೆ. ಇಲ್ಲಿನ ಸಂಭಾಷಣೆಯನ್ನು ಗಮನಿಸಿದರೆ ಈ ಮಹಿಳಾ ಅಧಿಕಾರಿ ಹಾಗೂ ಆರ್​ಟಿಐ ಕಾರ್ಯಕರ್ತ ಜೊತೆಯಾಗಿ ಸಾರ್ವಜನಿಕರಿಂದ ಹಣ ಸುಲಿಗೆಗೆ ಯತ್ನಿಸಿದಂತಿದೆ.

ಸಿಪಿ ಲೇಔಟ್​​ನಲ್ಲಿರೋ ಸೈಟ್ ನಂಬರ್ 65 ವಿಚಾರವಾಗಿ ಆರ್​ಟಿಐ ಅರ್ಜಿ ಸಲ್ಲಿಸಲು ಹೇಳಿದ ಶ್ವೇತಾ, ಕೊನೆಗೆ ಪ್ರಕರಣ ತನ್ನ ಬುಡಕ್ಕೆ ಬರುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಕೃಷ್ಣಮೂರ್ತಿಯನ್ನು ಬಲಿಪಶು ಮಾಡಲು ಯತ್ನಿಸಿರಬಹುದು ಎಂಬುದಕ್ಕೆ ಈ ಆಡಿಯೋ ಸಂದೇಹ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net