

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಂಟು ಸದಸ್ಯ ರಾಷ್ಟ್ರಗಳ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಚೀನಾ ಮತ್ತು ಪಾಕಿಸ್ತಾನಗಳಿಗೆ ಕಠಿಣ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಈ ಎರಡೂ ದೇಶಗಳು ಗಡಿ ಭಾಗದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಒಪ್ಪಂದಗಳನ್ನು ಉಲ್ಲಂಘಿಸಿ ಉಪಟಳ ನೀಡುತ್ತಿರುವರ ಕಾರಣ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಚೀನಾ ಲಡಾಖ್ ಭಾಗದಲ್ಲಿ ಗಡಿ ಅತಿಕ್ರಮಣ ನಡೆಸಿಕೊಂಡು ಕಿರಿಕಿರಿ ಉಂಟುಮಾಡುತ್ತಿದ್ದರೆ, ಪಾಕಿಸ್ತಾನ ಉಗ್ರರನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರ ಭಾಗದಲ್ಲಿ ಉಪಟಳ ನೀಡುತ್ತಿದೆ. ಇವೆಲ್ಲದರ ನಡುವೆ, ಪಾಕಿಸ್ತಾನ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸುತ್ತ ದ್ವಿಪಕ್ಷೀಯ ವಿಚಾರದಲ್ಲಿ ಇನ್ನೊಂದಿಷ್ಟು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಇಂದಿನ ಮಾತು ಎಚ್ಚರಿಕೆ ಸಂದೇಶವಾಗಿ ಕಂಡುಬಂದಿದೆ.
ಎಸ್ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು - ದೇಶಗಳ ನಡುವೆ ಪರಸ್ಪರ ಸಂಪರ್ಕ, ಸಹಕಾರ ವೃದ್ಧಿಯಾಗಬೇಕು ಎಂಬ ಅಂಶದಲ್ಲಿ ಭಾರತ ನಂಬಿಕೆ ಇರಿಸಿಕೊಂಡಿದೆ. ಈ ವಿಷಯದಲ್ಲಿ ನಾವು ಮುಂದಡಿ ಇರಿಸುತ್ತೇವೆ. ಇದೇ ವೇಳೆ, ಪರಸ್ಪರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಾದ್ದು ಕೂಡ ಅತೀ ಅವಶ್ಯ.
ಎಸ್ಸಿಒದ ಮೂಲ ತತ್ತ್ವಗಳ ಚೌಕಟ್ಟಿನಲ್ಲಿ ಹೊಂದಿಕೊಂಡೇ ಕೆಲಸ ಮಾಡಲು ಭಾರತ ಯಾವಾಗಲೂ ಬಯಸುತ್ತದೆ. ಆದರೆ, ದುರದೃಷ್ಟವಶಾತ್ ದ್ವಿಪಕ್ಷೀಯ ವಿಷಯಗಳನ್ನು ಎಸ್ಸಿಒದ ಕಾರ್ಯಸೂಚಿಯನ್ನು ಉಲ್ಲಂಘಿಸಿ ಪದೇಪದೆ ಪ್ರಸ್ತಾಪಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದು ಸಹ್ಯ ವಿಚಾರವಲ್ಲ.
ಕೋವಿಡ್ 19 ವಿಚಾರದಲ್ಲಿ ಈ ಸಾಂಕ್ರಾಮಿಕದ ವಿರುದ್ಧ ಮಾನವೀಯ ನೆಲೆಯಲ್ಲಿ ಹೋರಾಡಲು ಅಗತ್ಯ ಲಸಿಕೆ ಉತ್ಪಾದನೆ ಮತ್ತು ಪೂರೈಸಲು ಭಾರತ ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಲಿದೆ. ಈಗಾಗಲೇ ಭಾರತ 150 ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ಪೂರೈಸುವ ಕೆಲಸ ಮಾಡಿದೆ. (ಏಜೆನ್ಸೀಸ್)