

ಬೆಂಗಳೂರು: ಬಹು ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿನಗರ (ಆರ್.ಆರ್.ನಗರ) ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲ್ಲುತ್ತಿದ್ದಂತೆಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಅವರು ಟ್ವೀಟ್ನಲ್ಲಿ 'ಜ್ಯೋತಿಷಿಗಳ ಮಾತು ಕೇಳಿ ಅಭ್ಯರ್ಥಿಯನ್ನು ನಿಲ್ಲಿಸುವ ಬದಲು ಜನರ ನಾಡಿಮಿಡಿತ ಅರಿತು ಅಭ್ಯರ್ಥಿ ಹಾಕಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ಹೀನಾಯ ಸೋಲು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಚುಚ್ಚಿದ್ದಾರೆ.
ಮುನಿರತ್ನ ವಿರುದ್ಧ ಕಾಂಗ್ರೆಸ್ನಿಂದ ಕುಸುಮಾ ಕಣಕ್ಕಿಳಿಸಿದರೆ ಮುನಿರತ್ನ ಅವರನ್ನು ಸೋಲಿಸಬಹುದು ಎಂದು ಡಿ.ಕೆ.ಶಿಗೆ ಜ್ಯೋತಿಷಿ ಸಲಹೆ ನೀಡಿದ್ದರು ಎಂದೇ ಹೇಳಲಾಗುತ್ತಿದೆ. ಕುಸುಮಾ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ವೇಳೆಯಲ್ಲೂ ಡಿಕೆಶಿಯವರು ಜ್ಯೋತಿಷಿ ಸಲಹೆ ಪಡೆದಿದ್ದರು ಎಂದು ಮೂಲಗಳು ಹೇಳಿದ್ದವು. ಇದೇ ಕಾರಣಕ್ಕಾಗಿ ಕುಸುಮಾ ಅವರು ಹುಟ್ಟಿದ ಮಂಗಳವಾರದಂದೇ ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಲಾಗಿತ್ತು.
ಇದನ್ನೆಲ್ಲಾ ನೇರವಾಗಿ ಟ್ವೀಟ್ನಲ್ಲಿ ಉಲ್ಲೇಖಿಸದ ಸುಧಾಕರ್ ಅವರು, ಕಾಂಗ್ರೆಸ್ ಜನರ ನಾಡಿಮಿಡಿತ ಅರಿಯಬೇಕಿತ್ತು ಎಂದಿದ್ದಾರೆ.
ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಹಾಗೂ ರಾಜೇಶ್ ಗೌಡ ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಮುನಿರತ್ನ ಅವರ ಜನಪರ ಕಾರ್ಯಗಳು ಆರ್.ಆರ್.ನಗರದ ಜನತೆಯ ಮನ ಗೆದ್ದಿದ್ದು ಹ್ಯಾಟ್ರಿಕ್ ಗೆಲುವು ನೀಡುವ ಮೂಲಕ ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ. ಮುನಿರತ್ನಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಅಲ್ಲದೇ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರಿಗೂ ಅಭಿನಂದನೆ. ಎರಡೂ ಕ್ಷೇತ್ರಗಳಲ್ಲೂ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಬಿಜೆಪಿಯ ಎಲ್ಲಾ ನಾಯಕರು, ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.