ಕ್ಯಾಬ್​ ಹತ್ತಿದ ಆ ಮೂವರು ಹೀಗಾ ಮಾಡೋದು? ಚಾಲಕರೇ ಹುಷಾರಪ್ಪಾ...

cab
Published on

ಕೋಲ್ಕತ: ಮಧ್ಯಮ ವರ್ಗದ ಕುಟುಂಬವನ್ನು ನಡೆಸಲು ಕ್ಯಾಬ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಅಂದು ಕಾರು ಹತ್ತಿದ ಆ ಮೂವರು.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಖುರ್ಸಿದ್​ ಅಹಮ್ಮದ್​ ಎಂದಿನಂತೆ ಶುಕ್ರವಾರವೂ ಕಾರಿನ ಬಾಡಿಗೆಗಾಗಿ ಕಾಯುತ್ತಿದ್ದರು. ಆ್ಯಪ್​ ಆಧಾರಿತ ಕ್ಯಾಬ್​ ಸೇವೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಅವರಿಗೆ ರಶ್ಮೋನಿ ರಸ್ತೆಯಿಂದ ಪೂರ್ವ ಬುರ್ದ್ವಾನ್ಗೆ ಒಂದು ಬಾಡಿಗೆ ಸಿಕ್ಕಿದೆ. ಕ್ಯಾಬ್​ ಬುಕ್​ ಮಾಡಿದ್ದ ಮೂವರನ್ನು ಕಾರೊಳಗೆ ಹತ್ತಿಸಿಕೊಂಡ ಖುರ್ಸಿದ್​ ಪೂರ್ವ ಬುರ್ದ್ವಾನ್ಗೆ ಅವರನ್ನು ಕರೆದೊಯ್ದಿದ್ದಾನೆ. ಅಲ್ಲಿಗೆ ತೆರಳಿದ ನಂತರ ಅಶ್​ಗ್ರಾಮ್​ನ ಗೋಬಿಂದರ್​ಪುರಕ್ಕೆ ಕರೆದೊಯ್ಯಲು ಅವರು ಹೇಳಿದ್ದಾರೆ. ಅದರಂತೆ ಆತ ಮಾಡಿದ ನಂತರ ಶಕ್ತಿಗರ್​ಗೆ ಕರೆದೊಯ್ಯಲು ಹೇಳಲಾಗಿದೆ. ಶಕ್ತಿಗರ್​ ಕಡೆಗೆ ಹೋಗುವಾಗ ಆ ಮೂವರು ಖುರ್ಸಿದ್​ ತಲೆಗೆ ಬಂದೂಕು ಇಟ್ಟಿದ್ದಾರೆ. ಆತನ ಬಾಯಿ, ಕೈ ಕಾಲನ್ನು ಕಟ್ಟಿ ಥಳಿಸಿದ್ದಾರೆ. ಅವನ ಜೇಬಿನಲ್ಲಿದ್ದ 7 ಸಾವಿರ ರೂಪಾಯಿ, ಗಾಡಿಯ ದಾಖಲೆಗಳಲ್ಲೆವನ್ನು ಕಿತ್ತುಕೊಂಡು, ಆತನನ್ನು ಗಾಡಿಯಿಂದ ಹೊರಗೆ ದಬ್ಬಿದ್ದಾರೆ. ಕೆಲವೇ ಕ್ಷಣದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಎಚ್ಚರ ತಪ್ಪಿ ಬಿದ್ದಿದ್ದ ಖುರ್ಸಿದ್​ ಕೆಲ ಸಮಯದ ನಂತರ ಎಚ್ಚರಗೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸ್​ ಠಾಣೆಗೆ ತಲುಪಿ, ದೂರು ದಾಖಲಿಸಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರಾಧಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net