'ಕಾಸ್ಟಿಂಗ್ ಕೌಚ್' ಪದಕ್ಕೆ ನಮ್ಮಲ್ಲಿ ಜಾಗವಿಲ್ಲ! ಯಾವ ಹೇಮಾ ಕಮಿಟಿಯೂ ನಮಗೆ ಬೇಡ: ನಟಿ ಐಶ್ಚರ್ಯ

ವಿಜಯವಾಣಿ - 2024-09-23T103021.715 (1)
Published on

ತಮಿಳುನಾಡು: ಕಳೆದ ತಿಂಗಳು ಹೇಮಾ ಕಮಿಟಿಯ ವರದಿ ಹಿನ್ನೆಲೆ ಮಲಯಾಳಂ ಚಿತ್ರರಂಗದ ಸಾಲು ಸಾಲು ಸ್ಟಾರ್ ನಟಿಯರು ತಾವು ಕಾಸ್ಟಿಂಗ್ ಕೌಚ್​ಗೆ ಒಳಗಾಗಿದ್ದೆವು ಎಂಬ ಶಾಕಿಂಗ್ ಹೇಳಿಕೆ ಮೂಲಕ ಮಾಲಿವುಡ್​ ಇಂಡಸ್ಟ್ರಿಯ ಕರಾಳ ಮುಖವನ್ನು ಬಿಚ್ಚಿಟ್ಟರು. ಲೈಂಗಿಕ ಕಿರುಕುಳ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್​ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದರು. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿ, ಕಮಿಟಿಯನ್ನು ವಿಸರ್ಜಿಸಿದರು. ಇಂದಿಗೂ ಇದೊಂದು ಆರದ ನೋವಾಗಿ ಮಲಯಾಳಂ ಚಿತ್ರರಂಗಕ್ಕೆ ಕಾಡುತ್ತಿದೆ.

ಇನ್ನು ಮಾಲಿವುಡ್​ನಲ್ಲಿ ಹೇಮಾ ಕಮಿಟಿ ವರದಿ ಹೊರಬಿದ್ದ ಬೆನ್ನಲ್ಲೇ ಭಾರತೀಯ ಇತರೆ ಚಿತ್ರರಂಗದ ಹಿರಿಯ ಕಲಾವಿದರು ಕೂಡ ತಮ್ಮಲ್ಲೂ ಒಂದು ಹೇಮಾ ಕಮಿಟಿ ಬರಬೇಕು ಎಂದು ಆಯಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ. ಈ ಪೈಕಿ ಬಾಲಿವುಡ್​, ಟಾಲಿವುಡ್​, ಸ್ಯಾಂಡಲ್​ವುಡ್​ ನಟ-ನಟಿಯರು ಕೂಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸಮಸ್ಯೆಗಳಿವೆ. ಇದನ್ನು ಬಗೆಹರಿಸಲು ಮಲಯಾಳಂ ಚಿತ್ರರಂಗದಲ್ಲಿ ಬಂದ ಹೇಮಾ ಕಮಿಟಿ ನಮ್ಮಲ್ಲೂ ರಚನೆ ಆಗುವುದು ಒಳಿತು ಎಂದು ಬಹಿರಂಗವಾಗಿ ಅಭಿಪ್ರಾಯಿಸಿದ್ದಾರೆ. ಕಾಸ್ಟಿಂಗ್ ಕೌಚ್​ಗೆ ಅನೇಕ ನಟಿಯರು ತಮ್ಮ ಧ್ವನಿಗೂಡಿಸಿ ಮಾತನಾಡಿದ್ದರೆ, ಇತ್ತ ತಮಿಳು ನಟಿ ಐಶ್ಚರ್ಯ ಮಾತ್ರ ನಮ್ಮಲ್ಲಿ ಇಂತಹ ಯಾವುದೇ ಸಮಸ್ಯೆಯಿಲ್ಲ ಎಂದಿರುವುದು ಇದೀಗ ಭಾರೀ ಅಚ್ಚರಿಗೆ ದೂಡಿದೆ.

ಇತ್ತೀಚೆಗಷ್ಟೇ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿ ಮಾತನಾಡಿದ ತಮಿಳು ಚಿತ್ರರಂಗದ ನಟಿ ಐಶ್ವರ್ಯ ರಾಜೇಶ್, ​ "ಕಾಲಿವುಡ್​ನಲ್ಲಿ ಈ ರೀತಿಯ ಯಾವುದೇ ಕಾಸ್ಟಿಂಗ್ ಕೌಚ್ ಸಮಸ್ಯೆಗಳು ಕಂಡುಬಂದಿಲ್ಲ. ನನಗೆ ಬಲವಾದ ನಂಬಿಕೆ ಇದೆ ಅಂತಹ ಸಮಸ್ಯೆ ನಮ್ಮಲ್ಲಿಲ್ಲ ಎಂದು. ನಾನು ಕೂಡ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದ್ರೆ, ಇತರರು ಹೇಳುವಂತ ಕಾಸ್ಟಿಂಗ್ ಕೌಚ್ ಅನುಭವ ನಾನೆಂದಿಗೂ ಎದುರಿಸಿಲ್ಲ, ನೋಡಿಯೂ ಇಲ್ಲ" ಎಂದು ಹೇಳಿದರು. ಸದ್ಯ ನಟಿಯ ಈ ಹೇಳಿಕೆ ಹಲವರಲ್ಲಿ ಅಚ್ಚರಿ ಮೂಡಿಸಿದ್ದು, ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net