ಆರ್​. ಅಶ್ವಿನ್ ಮುಂದೆ ತಲೆಬಾಗಿದ ವಿರಾಟ್​ ಕೊಹ್ಲಿ! ರನ್​ ಮೆಷಿನ್​ ನಡೆಗೆ ಕ್ರೀಡಾಭಿಮಾನಿಗಳ ಮೆಚ್ಚುಗೆ

Virat Kohli R Ashwin
Published on

ಚೆನ್ನೈ: ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್​ ಇಂಡಿಯಾ 280 ರನ್‌ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. 515 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಪಡೆಗೆ ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್‌ನಿಂದ ಪೆಟ್ಟು ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ, ಬ್ಯಾಟಿಂಗ್​ನಲ್ಲಿ ಕಮಾಲ್​ ಮಾಡಿದ್ದ ಈ ಅನುಭವಿ ಆಟಗಾರ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್​ನಲ್ಲಿ ಜಾದೂ ಮಾಡಿದರು. ಈ ಟೆಸ್ಟ್​ ಪಂದ್ಯದಲ್ಲಿ ಅಶ್ವಿನ್​ ಅಕ್ಷರಶಃ ಮಿಂಚಿದರು. ಅಲ್ಲದೆ, ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಅಶ್ವಿನ್​ ಬರೆದುಕೊಂಡರು. ಇದೇ ಸಂದರ್ಭದಲ್ಲಿ ಟೀಮ್​ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ, ಅಶ್ವಿನ್ ಆಟಕ್ಕೆ ತಲೆಬಾಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾಂಗ್ಲಾದೇಶದ ವಿರುದ್ಧ ಬೃಹತ್ ಜಯ ಸಾಧಿಸುವಲ್ಲಿ ಅಶ್ವಿನ್​ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ 144 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ರವೀಂದ್ರ ಜಡೇಜಾ ಜತೆಗೂಡಿ ಅಶ್ವಿನ್ ಸೂಪರ್ ಶತಕ ಸಿಡಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪಿನ್ ಜಾದೂವಿನಿಂದ ಬಾಂಗ್ಲಾ ಇನ್ನಿಂಗ್ಸ್ ಕಟ್ಟಿಹಾಕಿದರು. ಬರೋಬ್ಬರಿ 6 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 37ನೇ ಬಾರಿಗೆ 5 ವಿಕೆಟ್ ಸಾಧನೆ ಮಾಡಿದರು. ಅಲ್ಲದೆ, ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿರುವ ಆಸೀಸ್ ದಂತಕಥೆ ಶೇನ್ ವಾರ್ನ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡರು. ಇವರಿಗಿಂತ ಮೊದಲು ಮುತ್ತಯ್ಯ ಮುರಳೀಧರನ್ 67 ಬಾರಿ 5 ವಿಕೆಟ್ ಕಬಳಿಸಿದ್ದಾರೆ.

ಅಶ್ವಿನ್ ಅವರ ಆಟದಿಂದ ಪ್ರಭಾವಿತರಾದ ವಿರಾಟ್ ಕೊಹ್ಲಿ, ಕ್ರೀಡಾಂಗಣದಲ್ಲಿ ಅವರಿಗೆ ತೋರಿದ ಗೌರವ ಕ್ರೀಡಾಭಿಮಾನಿಗಳ ಮನಗೆದ್ದಿದೆ. ಅಶ್ವಿನ್​ ಅವರ ಮುಂದೆ ಬಂದ ಕೊಹ್ಲಿ, ತನ್ನ ಎರಡೂ ಕೈಗಳನ್ನು ಮೇಲೆ ಎತ್ತಿ ತಲೆಬಾಗುವ ಮೂಲಕ ಅಶ್ವಿನ್​ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೊಹ್ಲಿ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟೀಮ್​ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 376 ರನ್ ಗಳಿಸಿತ್ತು. ಬಾಂಗ್ಲಾದೇಶ 149 ರನ್​ಗಳಿಗೆ ಸರ್ವಪತನ ಕಂಡಿತು. ಆ ಬಳಿಕ ಭಾರತ ತಂಡ 287/4 ರನ್​ಗಳಿಗೆ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಬಾಂಗ್ಲಾದೇಶಕ್ಕೆ 515 ರನ್‌ಗಳ ಬೃಹತ್ ಗುರಿ ನೀಡಿತು. ಈ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಯಾವುದೇ ಹಂತದಲ್ಲೂ ಗುರಿಯತ್ತ ಸಾಗಲಿಲ್ಲ. ಟೀಮ್​ ಇಂಡಿಯಾ ಬೌಲರ್‌ಗಳು ಬಾಂಗ್ಲಾ ಪಡೆಯನ್ನು ಕಟ್ಟಿಹಾಕಿದರು. 234 ರನ್‌ಗಳಿಗೆ ಆಲೌಟ್ ಆಗಿ 280 ರನ್‌ಗಳಿಂದ ಸೋತಿತು.

ಬಾಂಗ್ಲಾ ತಂಡದ ನಾಯಕ ಶಾಂಟೊ 82 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರವಿಚಂದ್ರನ್ ಅಶ್ವಿನ್ 6 ವಿಕೆಟ್ ಹಾಗೂ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಬಾಂಗ್ಲಾ ತಂಡದ ಪತನಕ್ಕೆ ಕಾರಣರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net