ಜಲ ಸಂರಕ್ಷಣೆಗೆ ಬೇಕು ದೃಢ ಸಂಕಲ್ಪ

Water Conservation
Published on
Ravishankar Guruji
ಶ್ರೀ ರವಿಶಂಕರ್ ಗುರೂಜಿ
ತೀವ್ರ ಬರದಿಂದ ಒಣಗಿ ಹೋಗಿರುವ ಕರ್ನಾಟಕವು ನೀರಿಗಾಗಿ ಪರಿತಪಿಸುತ್ತಿರುವಾಗ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಸಾಕಾರಗೊಂಡಿರುವ ಒಂದು ಆಶಾಕಿರಣದ ಕಥೆ ಇದು. ಹುಣಸೂರು ತಾಲೂಕಿನ ಹುಂಡಿಮಾಲದ ಓರ್ವ ರೈತರ ಅನುಭವ ಕೇಳಿ, ‘ಬರಪೀಡಿತ ತಾಲೂಕು ಎಂಬ ಪಟ್ಟಿಯಲ್ಲೇ ನಮ್ಮನ್ನು ಸೇರಿಸಲಾಗಿಲ್ಲ. 5-6 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ’ ಎನ್ನುತ್ತಾರೆ. ಹುಂಡಿಮಾಲದ ಮತ್ತೋರ್ವ ಸಣ್ಣ ರೈತರಾದ ರಾಜೇಂದ್ರ, ‘5-6 ವರ್ಷಗಳ ಹಿಂದೆ ನಮ್ಮ ಕೊಳವೆಬಾವಿಗಳಲ್ಲಿ ನೀರೇ ಇರಲಿಲ್ಲ. ಇರುವ ಒಂದು ತೆರೆದ ಬಾವಿಯಲ್ಲಿ ನೀರು ಬತ್ತಿ ಹೋಗಿ ಐದಾರು ವರ್ಷಗಳೇ ಆಗಿತ್ತು. ನಾವೆಲ್ಲರೂ. ಸಾಲದಲ್ಲಿ ಮುಳುಗಿದ್ದೆವು ಮತ್ತು ಇನ್ನೊಂದು ಬೋರ್ವೆಲ್ ಮೂಲಕ ನೀರು ಸಿಗುತ್ತದೇನೋ ಎಂಬ ಆಶಯದಲ್ಲಿ ಇದ್ದೆವು. ಆರ್ಟ್ ಆಫ್ ಲಿವಿಂಗ್ ಸಂಸ್ಥೆ 2021ರಲ್ಲಿ ಈ ಪ್ರದೇಶದಲ್ಲಿ ಪುನರ್ಜಲೀಕರಣದ ಕಟ್ಟಡಗಳನ್ನು ನಿರ್ವಿುಸಲು ಆರಂಭಿಸಿದಾಗಿನಿಂದಲೂ, 216 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಈ ತಾಲ್ಲೂಕು ಸೇರಿಲ್ಲ. ಅವರ ನದಿಗಳ ಪುನಶ್ಚೇತನ ತಂಡದೊಡನೆ ನಾವೂ ಕೈಜೋಡಿಸಿ ಕೆಲಸ ಮಾಡಿದೆವು. ಜಿಯೋಟ್ಯಾಗಿಂಗ್​ಗೆ ಅನುಗುಣವಾಗಿ, ಈ ಕಟ್ಟಡಗಳನ್ನು ನಿಖರವಾಗಿ ಎಲ್ಲಿ ನಿರ್ವಿುಸಬೇಕೆಂದು ನಮಗೆ ತಿಳಿಸಲಾಯಿತು. ನಮ್ಮ ಪಟ್ಟಣದಲ್ಲಿ ಐದಾರು ಪುನರ್ಜಲೀಕರಣ ಕಟ್ಟಡಗಳ ನಿರ್ವಣವಾಗಿದೆ’ ಎಂದರು.

ರಾಜೇಂದ್ರ ಮತ್ತಿನ್ನಿತರ ರೈತರು ವಾಣಿಜ್ಯ ಬೆಳೆಗಳಾದ ಅಕ್ಕಿ, ಅಡಿಕೆ, ತೆಂಗಿನಕಾಯಿ, ಅರಿಶಿಣ ಮತ್ತು ವರ್ಷವಿಡೀ ನೀರಿನ ಅವಶ್ಯಕತೆಯನ್ನುಳ್ಳ ಬೆಳೆಗಳನ್ನು ಬೆಳೆಯುತ್ತಾರೆ. ‘ನಾವು ಕೇವಲ ಆರು ತಿಂಗಳಿಗಾಗಿ ಬೆಳೆಗಳನ್ನು ಬೆಳೆಯುವಂತಹ, ಒಣಗಿದ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯುವಂತಹ ರೈತರಲ್ಲ. ಇಲ್ಲಿ ಎಲ್ಲ ರೈತರೂ ಪಂಪ್​ಸೆಟ್ಟುಗಳನ್ನು, ಬೋರ್ವೆಲ್​ಗಳನ್ನು ಹೊಂದಿರುವವರೇ. ಪುನರ್ಜಲೀಕರಣ ಕಟ್ಟಡಗಳ ನಿರ್ಮಾಣ ಸರಳವಾದ ಉಪಾಯವಾಗಿದ್ದು, ಈ ತಾಲೂಕಿನ ರೈತರು ಇದರಿಂದ ಬಹಳ ಲಾಭ ಪಡೆದಿದ್ದಾರೆ’ ಎಂದು ರಾಜೇಂದ್ರ ವಿವರಿಸಿದರು.

‘ಐದಾರು ವರ್ಷಗಳ ಹಿಂದೆ ನೀರು ಬೋರ್ವೆಲ್​ಗಳಲ್ಲಿ ಪೂರ್ಣವಾಗಿ ಬತ್ತಿ ಹೋಗಿತ್ತು. ಈ ಪುನರ್ಜಲೀಕರಣ ಕಟ್ಟಡಗಳನ್ನು ಮಾಡಿದಾಗ ನೀರು 40-45 ಅಡಿಗಳಿಗೇ ಸಿಗಲು ಆರಂಭವಾಯಿತು. ಈಗ 10-12 ಅಡಿಗಳಿಗೇ ಬೋರ್ವೆಲ್​ನಲ್ಲಿ ನೀರು ಸಿಗುತ್ತದೆ. ಮೊದಲು ನಮಗೆ ಯಾವ ರೀತಿಯಾಗಿ ನೀರು ಸಿಗುತ್ತಿತ್ತೋ, ಅದೇ ರೀತಿಯಾಗಿ ಈಗ ನೀರು ನಮಗೆ ಸಿಗಲು ಆರಂಭವಾಗಿದೆ’ ಎನ್ನುತ್ತಾರೆ ರೈತರು. ಈ ಪ್ರದೇಶದ ದೇವರಾಜ್, ‘ನೀರು ಕಡಿಮೆಯಾದಾಗ ನಾವು ಬೆಳೆಯುವ ಬೆಳೆಯೂ ಕಡಿಮೆಯಾಗುತ್ತದೆ. ಈಗ ಸಮಯಕ್ಕೆ ಸರಿಯಾಗಿ ನೀರು ಸಿಗುವುದರಿಂದ ಬೆಳೆಯೂ ಚೆನ್ನಾಗಿ ಬೆಳೆಯುತ್ತದೆ. ಹಿಂದಿಗಿಂತಲೂ ನಾವು ಈಗ ಒಂದೊಂದು ಬೆಳೆಗೂ 10,000-15,000 ರೂಪಾಯಿಗಳನ್ನು ಹೆಚ್ಚಾಗಿ ಗಳಿಸುತ್ತಿದ್ದೇವೆ. ಹೀಗೇ ಬೇಸಿಗೆಯಲ್ಲಿ ಮುಂದುವರಿದರೆ, ಹೆಚ್ಚು ಬೆಳೆ ಲಭ್ಯವಾಗುತ್ತದೆ. ಎರಡು ಬೆಳೆಗಳನ್ನು ಬೆಳೆಯುವವರಿಗೆ ಇದರಿಂದ ಹೆಚ್ಚು ಲಾಭ. ಒಂದೇ ಬೆಳೆಯನ್ನು ಬೆಳೆಯುವವರಿಗೆ ಕಡಿಮೆ ಲಾಭ’ ಎನ್ನುತ್ತಾರೆ.

ಪುನರ್ಜಲೀಕರಣ ಕಟ್ಟಡಗಳ ನಿರ್ಮಾಣ ಹೇಗಾಗುತ್ತದೆ?

  • 15-20 ಅಡಿಗಳಷ್ಟು ಗುಂಡಿ ಅಗೆಯುವುದು. ಅದರ ನಂತರ, ಸಿಮೆಂಟಿನ ರಿಂಗ್ ಹಾಕುವುದು.
  • ನಂತರ ಆ ರಿಂಗಿನ ಸುತ್ತಲೂ ಕಲ್ಲುಗಳನ್ನು ಹಾಕುವುದು.
  • ಕಲ್ಲುಗಳ ಮೇಲೆ ದೊಡ್ಡ ಬೌಲ್ಡರ್​ಗಳನ್ನು ಹಾಕುವುದು.
  • ಜೆಲ್ಲಿ ಕಲ್ಲುಗಳನ್ನು ರಿಂಗಿನ ಒಳಗೆ ಹಾಕಿ, ಅದನ್ನು ಮುಚ್ಚಳದಿಂದ ಮುಚ್ಚುವುದು. ನೀರು ಅದರ ಮೂಲಕ ಭೂಮಿಯೊಳಗೆ ಹೋಗುತ್ತದೆ.

‘2021ರಲ್ಲಿ ಈ ಯೋಜನೆಯಲ್ಲಿ ಕೆಲಸ ಮಾಡಲು ಆರಂಭಿಸಿದೆವು. ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಿದೆವು. ಇದರಿಂದಾಗಿ ನಮಗೆಲ್ಲರಿಗೂ ಇದರಲ್ಲಿ ಪೂರ್ಣ ಅನುಭವ ಈಗ ಬಂದಾಗಿದೆ. 100% ಫಲಿತಾಂಶ ನಮಗೆ ದೊರೆತಿದೆ. ಆ ಗುಂಡಿಗಳಿಂದ ನೀರು ಉಕ್ಕಿ ಬರುತ್ತಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಇದು ಬೇರೆ ರೈತರಿಗೂ ಸಹಾಯವಾಗುತ್ತದೆ’ ಎನ್ನುತ್ತಾರೆ ರಾಜೇಂದ್ರ. ಹೀಗೆ ಜಲ ಸ್ವಾವಲಂಬನೆ ನಿಟ್ಟಿನಲ್ಲಿ ಸಣ್ಣ ಹೊಂಡಗಳು ದೊಡ್ಡ ಪರಿಹಾರ ಒದಗಿಸುತ್ತಿರುವುದು ಖುಷಿಯ ಸಂಗತಿ.

(ಲೇಖಕರು ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net