VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ

1131680
Published on

ಸ್ಲೋವೇಕಿಯ : ಆಕಾಶದಲ್ಲಿ ಹಾರುವ ಕಾರು ಇಂಗ್ಲೀಷ್​ ಚಿತ್ರಗಳ ಕಲ್ಪನೆಯಾಗಿದ್ದ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಆಕಾಶದಲ್ಲಿ ರೆಕ್ಕೆಬಿಚ್ಚಿ ಹಾರುವುದರೊಂದಿಗೆ ನೆಲದ ಮೇಲೂ ಠೀವಿಯಿಂದ ಓಡುವ ವಿಶೇಷ ಕಾರು ಆವಿಷ್ಕಾರಗೊಂಡಿದೆ. ಯೂರೋಪಿನ ಸ್ಲೋವೇಕಿಯ ದೇಶದಲ್ಲಿ ಕ್ಲೈನ್ ​​ವಿಷನ್‌​ ಕಂಪೆನಿಯ 'ಏರ್​ಕಾರ್​' ಅದೇ ಮಾದರಿಯ ವಾಹನವನ್ನು ನಿರ್ಮಿಸಿದೆ.

ಜೂನ್ 28 ಕ್ಕೆ ಈ ಏರ್​ಕಾರ್,​ ಸ್ಲೋವೇಕಿಯಾದ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹಾರಿ ಈ ರೀತಿಯ ವಾಯುಪ್ರಯಾಣ ನಡೆಸಿದ ಮೊಟ್ಟ ಮೊದಲ ಕಾರು ಎಂಬ ಹೆಗ್ಗಳಿಕೆ ಗಳಿಸಿದೆ. ನಿತ್ರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಮಾಡಿದ ಈ ಕಾರು 35 ನಿಮಿಷಗಳಲ್ಲಿ ಬ್ರಾಟಿಸ್ಲಾವ ನಗರದ ವಿಮಾನ ನಿಲ್ದಾಣ ತಲುಪಿತು. ಅಲ್ಲಿ ಲ್ಯಾಂಡ್ ಮಾಡಿದ ಮೇಲೆ ಒಂದು ಬಟನ್ ಒತ್ತಿದ್ದರಿಂದ ಮೂರೇ ನಿಮಿಷಗಳಲ್ಲಿ ಸ್ಪೋರ್ಟ್​ ಕಾರಿನ ರೂಪಕ್ಕೆ ಬದಲಾಗಿ, ನಂತರ ಬ್ರಾಟಿಸ್ಲಾವದ ಪಟ್ಟಣದ ರಸ್ತೆಗಳನ್ನು ಪ್ರವೇಶಿಸಿತು.

ಕ್ಲೈನ್ ​​ವಿಷನ್‌ ಪೇಟೆಂಟ್​ ಮಾಡಿಸಿರುವ ಈ ಡುಯಲ್​ ಮೋಡ್​ ಕಾರ್-ಏರ್​ಕ್ರಾಫ್ಟ್ ವಾಹನದ ಪ್ರೋಟೋಟೈಪನ್ನು ಅದನ್ನು ಡಿಸೈನ್​ ಮಾಡಿರುವ ಸಹಸಂಸ್ಥಾಪಕ ಪ್ರೊಫೆಸರ್ ಆ್ಯಂಟನ್ ಜಜಾಕ್ ಓಡಿಸಿದರು ಮತ್ತು ಹಾರಿಸಿದರು. ಈವರೆಗೆ ಹಲವು ಬಾರಿ ಹಾರುವ ಪ್ರಯೋಗದಲ್ಲಿ ಸಫಲವಾಗಿರುವ ಈ ಕಾರು 142ನೇ ಯಶಸ್ವಿ ಲ್ಯಾಂಡಿಂಗ್ಅನ್ನು ಬ್ರಾಟಿಸ್ಲಾವಾದಲ್ಲಿ ಪೂರೈಸಿದೆ.

ಈ ಏರ್​ಕಾರ್​ ಪ್ರೋಟೋಟೈಪ್ 1 ಗೆ 160 ಎಚ್​ಪಿ ಬಿಎಂಡಬ್ಲ್ಯೂ ಇಂಜಿನ್ ಜೊತೆಗೆ ವಿಮಾನಗಳಿಗೆ ಬೇಕಾದ ಫಿಕ್ಸಡ್​ ಪ್ರೊಪೆಲ್ಲರ್ ಮತ್ತು ಬ್ಯಾಲಿಸ್ಟಿಕ್ ಪಾರಾಶೂಟನ್ನು ಅಳವಡಿಸಲಾಗಿದೆ. 45 ಡಿಗ್ರಿ ತಿರುವುಗಳೊಂದಿಗೆ ಸುಲಭವಾಗಿ ವಾಯುಯಾತ್ರೆ ನಡೆಸಿದ ಏರ್​ಕಾರ್​, 8200 ಅಡಿಗಳ ಎತ್ತರದಲ್ಲಿ ಗಂಟೆಗೆ 190 ಕಿಲೋಮೀಟರ್​ಗಳ ಗರಿಷ್ಠ ವೇಗ ತಲುಪಿತು ಎಂದು ಕ್ಲೈನ್ ​​ವಿಷನ್‌ ಕಂಪೆನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net