ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ; ಹೆಂಡತಿಯೊಂದಿಗೆ ನಿತ್ಯ ಜಗಳ ಆಡುತ್ತಿದ್ದವನ ಸಾವಿಗೆ ಕಾರಣವೇನು?

murder
Published on

ಬೆಂಗಳೂರು : ಬೆಂಗಳೂರಿನ ಕಾಡುಗೊಂಡನಹಳ್ಳಿಯ ಶ್ಯಾಂಪುರ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಟೈಲ್ಸ್ ಕೆಲಸಗಾರನನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕಾವಲ್‌ಬೈರಸಂದ್ರದ ನಿವಾಸಿ 35 ವರ್ಷ ವಯಸ್ಸಿನ ಕೃಷ್ಣಮೂರ್ತಿ (35) ಹತ್ಯೆಯಾದವರು.

ಕೃಷ್ಣಮೂರ್ತಿ ಶುಕ್ರವಾರ ರಾತ್ರಿ 10 ಗಂಟೆಗೆ ಕೇರಂ ಆಡಲು ಮನೆಯ ಹತ್ತಿರದಲ್ಲಿರುವ ಸ್ನೇಹಿತರ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಶ್ಯಾಂಪುರ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಕೃಷ್ಣಮೂರ್ತಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿ ಪರಾರಿಯಾದರು. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೃಷ್ಣಮೂರ್ತಿ ಅವರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಡಿಜೆಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಎರಡನೇ ಪತ್ನಿ ಕೊಲೆ ಮಾಡಿಸಿರುವ ಅನುಮಾನ ವ್ಯಕ್ತಪಡಿಸಿರುವ ಕೃಷ್ಣಮೂರ್ತಿ ಸಹೋದರ ಆಕೆಯ ವಿರುದ್ಧ ದೂರು ನೀಡಿದ್ದಾನೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2ನೇ ಪತ್ನಿ ಮೇಲೆ ಶಂಕೆ : ಟೈಲ್ಸ್ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಮೊದಲ ಹೆಂಡತಿಯನ್ನು ತೊರೆದು ಮತ್ತೊಂದು ಮದುವೆಯಾಗಿದ್ದರು. ಆದರೆ, ಮದ್ಯದ ಅಮಲಲ್ಲಿ ಎರಡನೇ ಹೆಂಡತಿಯ ಜತೆಗೂ ಕಿರಿಕ್ ಮಾಡಿಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದ ಇಬ್ಬರ ನಡುವೆ ಪ್ರತಿನಿತ್ಯ ಗಲಾಟೆಗಳಾಗುತ್ತಿದ್ದವು. ಎಷ್ಟೋ ಬಾರಿ ಜಗಳ ತಾರಕಕ್ಕೆ ಹೋಗಿ ಮೂರು ಸಲ ಇಬ್ಬರಿಗೂ ಪೊಲೀಸರೇ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇಷ್ಟಾದರೂ ಮನೆ ಬಳಿ ಜಗಳ ನಡೆಯುತ್ತಿತ್ತು. ಇದರಿಂದ ನೊಂದ 2ನೇ ಪತ್ನಿ ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net