

ಟೆನ್ನೆಸ್ಸೆ : ಕರೊನಾ ಲಸಿಕೆ ಪಡೆಯದ ಜನರು ತಮ್ಮ ಆರೋಗ್ಯಕ್ಕೆ ಅಪಾಯ ಒಡ್ಡುವುದರೊಂದಿಗೆ, ಕರೊನಾ ವೈರಸ್ ರೂಪಾಂತರಗಳ ಸಂಭಾವ್ಯ 'ಕಾರ್ಖಾನೆ'ಗಳಾಗುತ್ತಾರೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರೊಬ್ಬರು ಎಚ್ಚರಿಸಿದ್ದಾರೆ.
ಹೆಚ್ಚು ಹರಡುವ ಕರೊನಾ ರೂಪಾಂತರಿಗಳು ಜಗತ್ತಿನಾದ್ಯಂತ ಆರ್ಭಟ ನಡೆಸುತ್ತಿರುವ ಸಂದರ್ಭದಲ್ಲಿ ಬಹುತೇಕ ರಾಷ್ಟ್ರಗಳು ಅಧಿಕಾಧಿಕ ಜನರಿಗೆ ಲಸಿಕೆ ನೀಡುವ ಪ್ರಯತ್ನ ಮಾಡುತ್ತಿವೆ. ಆದರೆ ಹಲವು ಕಡಿಮೆ ಆದಾಯದ ದೇಶಗಳಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣದಿಂದ ಮತ್ತು ಜನರಲ್ಲಿರುವ ಲಸಿಕೆ ಹಿಂಜರಿಕೆಯಿಂದಾಗಿ ಕರೊನಾದ ಹೊಸ ರೂಪಾಂತರಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ತಡೆಯುವ ಪ್ರಯತ್ನಕ್ಕೆ ಹಿನ್ನಡೆ ಲಭಿಸಿದೆ ಎನ್ನಲಾಗಿದೆ.
ಹೀಗಿರುವಾಗ, ಟೆನ್ನೆಸ್ಸೆಯ ನಾಶವಿಲ್ಲೆ ನಗರದಲ್ಲಿರುವ ವಾಂಡರ್‌ಬಿಲ್ಟ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕ ಡಾ. ವಿಲಿಯಂ ಶಾಫ್ನರ್ ಅವರು, "ಲಸಿಕೆ ಪಡೆಯದ ಜನರ ಸಂಖ್ಯೆ ಹೆಚ್ಚಾದಷ್ಟೂ ವೈರಸ್ ಹೆಚ್ಚಾಗಲು ಹೆಚ್ಚಿನ ಅವಕಾಶಗಳು ಸಿಗುತ್ತವೆ" ಎಂದು ಎಚ್ಚರಿಸಿದ್ದಾರೆ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ. ಕೆಲವು ರೂಪಾಂತರಗಳು ವೈರಸ್‌ನ್ನು ದುರ್ಬಲಗೊಳಿಸುತ್ತವೆ. ಆದರೆ ಡೆಲ್ಟಾ ರೂಪಾಂತರಿ ಸೇರಿದಂತೆ ಹಲವು ಕಾಳಜಿಯ ರೂಪಾಂತರಿಗಳು ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಹೊಡೆತ ನೀಡುತ್ತವೆ. "ವೈರಸ್ ರೂಪಾಂತರಗೊಂಡಾಗ, ಅದು ಇನ್ನೂ ಹೆಚ್ಚಿನ ಅಪಾಯವನ್ನು ಒಡ್ಡುವಂಥ ರೂಪಾಂತರಿಯಾಗಿ ಬದಲಾಗಬಹುದು" ಎಂದು ಶಾಫ್ನರ್ ಹೇಳಿದ್ದಾರೆ.
ತಜ್ಞರ ಪ್ರಕಾರ, ವೈರಸ್ ತನ್ನನ್ನು ತಾನೇ ಪುನರಾವರ್ತಿಸಿಕೊಂಡರೆ ರೂಪಾಂತರವಾಗಲು ಅವಕಾಶ ಸಿಗುತ್ತದೆ. ಲಸಿಕೆ ಪಡೆಯದ ಗುಂಪುಗಳು ಆ ಅವಕಾಶವನ್ನು ಒದಗಿಸುತ್ತವೆ. ಹರಡದ ವೈರಸ್‌ಗಳು ರೂಪಾಂತರಗೊಳ್ಳಲು ಸಾಧ್ಯವಿಲ್ಲದ ಕಾರಣ, ಹೆಚ್ಚು ಅಪಾಯ ಒಡ್ಡುವ ರೂಪಾಂತರ ಪಡೆಯದಂತೆ ತಡೆಯಲು ಗರಿಷ್ಠ ಮಟ್ಟದ ಲಸಿಕಾಕರಣದ ವ್ಯಾಪ್ತಿಯು ಪರಿಣಾಮಕಾರಿ ಸಾಧನವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)