

ನವದೆಹಲಿ: ರಫೇಲ್ ಒಪ್ಪಂದ ಇದೀಗ ಮತ್ತೊಮ್ಮೆ ಸುದ್ದಿಯಾಗಲಾರಂಭಿಸಿದೆ. ಈ ಒಪ್ಪಂದದ ಕುರಿತಾಗಿ ತನಿಖೆ ನಡೆಸಲು ಫ್ರಾನ್ಸ್ನಲ್ಲಿ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದರಲ್ಲಿ ಪ್ರಸಾರವಾದ ಬೆನ್ನಲ್ಲೇ ಕಾಂಗ್ರೆಸ್ ಈ ವಿಚಾರವಾಗಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆರೋಪಿಸಲು ಆರಂಭಿಸಿದೆ.
ರಫೇಲ್ ಒಪ್ಪಂದದಲ್ಲಿ ಮಧ್ಯವರ್ತಿಗಳಿಗೆ ಕೋಟಿ ಕೋಟಿ ರೂಪಾಯಿ ಕೊಡಲಾಗಿದೆ ಎನ್ನುವುದಕ್ಕೆ ದಾಖಲೆಗಳಿವೆ ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರಧಾನಿ ಮೋದಿ ಸರ್ಕಾರ ಏಕೆ ಸಿದ್ಧರಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ನಾಲ್ಕು ಆಯ್ಕೆಗಳನ್ನೂ ಕೊಟ್ಟಿದ್ದಾರೆ. ಒಂದು ಅವರಿಗೆ ಮನಸ್ಸಾಕ್ಷಿ ಕಾಡುತ್ತಿರಬೇಕು, ಎರಡನೆಯದು ಅವರ ಸ್ನೇಹಿತರನ್ನು ರಕ್ಷಿಸುವ ಹೊಣೆಯಿರಬೇಕು, ಮೂರನೆಯದು ಜೆಪಿಸಿಯಲ್ಲಿ ರಾಜ್ಯ ಸಭಾ ಸದಸ್ಯರು ಇಲ್ಲದಿರುವುದು, ನಾಲ್ಕನೆಯದು ಮೇಲಿನ ಎಲ್ಲ ಆಯ್ಕೆಗಳು ಎಂದು ಆಯ್ಕೆ ನೀಡಿದ್ದಾರೆ.
ಏತನ್ಮಧ್ಯೆ, ಪಕ್ಷದ ವಕ್ತಾರ ಪವನ್ ಖೇರಾ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, "ರಫೇಲ್ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಅಂತರ್-ಸರ್ಕಾರಿ ಒಪ್ಪಂದವಾಗಿದೆ ಮತ್ತು ಉಭಯ ದೇಶಗಳಲ್ಲಿ ಒಂದು ತನಿಖೆಯನ್ನು ಪ್ರಾರಂಭಿಸಿದೆ ಹಾಗೂ ಇನ್ನೊಂದು ದೇಶವು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ರಫೆಲ್ ಒಪ್ಪಂದದ ಭ್ರಷ್ಟಾಚಾರ, ಪ್ರಭಾವ ಬೀರುವಿಕೆ, ಮನಿ ಲಾಂಡರಿಂಗ್, ಪರವಾದದಂತಹ ವಿಷಯಗಳ ಬಗ್ಗೆ ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆಗಳಾಗಿದೆ. ಇಡೀ ರಾಷ್ಟ್ರ, ಇಡೀ ಜಗತ್ತು ಈಗ ನವದೆಹಲಿಯತ್ತ ನೋಡುತ್ತಿದೆ. ಆದರೂ ನಮ್ಮ ಸರ್ಕಾರ ಏಕಾಗಿ ಮೌನ ತಾಳಿದೆ?" ಎಂದು ಪ್ರಶ್ನಿಸಿದರು. ರಫೇಲ್ ಒಪ್ಪಂದದಲ್ಲಿ ನಾವು 570 ಕೋಟಿ ರೂಪಾಯಿ ವೆಚ್ಚದ ವಸ್ತುವನ್ನು 1,670 ಕೋಟಿಗೆ ರೂಪಾಯಿಗೆ ಖರೀದಿಸಿದ್ದೇವೆ ಎಂಬುದು ಈಗ ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)