

ಬಾಗಲಕೋಟೆ: ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ ಬಾಕಿ ಉಳಿದಿದ್ದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಇಂದು ಬೆಳಗ್ಗಿನಿಂದಲೇ ಹಲವೆಡೆ ಆರಂಭಗೊಂಡಿದ್ದು, ಇದೀಗ ಬಾಗಲಕೋಟೆಯ 132ರ ಮತಗಟ್ಟೆಯಲ್ಲಿ ತಾಂತ್ರಿಕ ದೋಷದ ಕಾರಣ, ತಾತ್ಕಾಲಿಕವಾಗಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ತಾಂತ್ರಿಕ ದೋಷ ಎದುರಾದ ಕಾರಣ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ವಿವಿಪ್ಯಾಟ್ನಲ್ಲಿ ದೋಷ ಎಂದು ಅಲ್ಲಿನ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಸಮಯ ಮತದಾನ ವಿಳಂಬವಾಗಿತ್ತು. ಆದರೆ, ಈಗ ತಾಂತ್ರಿಕ ದೋಷ ಪರಿಹರಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರೆದಿದೆ.
ಇದೇ ರೀತಿಯ ಸಮಸ್ಯೆ ಕಾರವಾರ ಜಿಲ್ಲೆಯ ವಿವಿಧೆಡೆ ನಡೆದಿದ್ದು, ಮತಯಂತ್ರಗಳು ಕೈಕೊಟ್ಟು ಮತದಾನಕ್ಕೆಅಡಚಣೆ ಉಂಟುಮಾಡಿದೆ.
ಕಾರವಾರದ ಸೇಂಟ್ ಮೈಕಲ್ ಶಾಲೆಯ 107ನೇ ಸಂಖ್ಯೆಯ ಮತಗಟ್ಟೆ ಮತ್ತು ಶಿರವಾಡದ 62ನೇ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆಯಾದರೂ ಮತದಾನ ಪ್ರಾರಂಭವಾಗಿರಲಿಲ್ಲ. ಶಿರಸಿಯ ಅವೇಮರಿಯಾ ಶಾಲೆಯ 74ನೇ ಮತಗಟ್ಟೆಯಲ್ಲಿಯೂ ಮತಯಂತ್ರ ಕೈ ಕೊಟ್ಟು, ಅರ್ಧ ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು ಎಂದು ವರದಿಯಾಗಿದೆ.