

ಎನ್.ಆರ್.ಪುರ: ಅಂಗವಿಕಲರು ಹಾಗೂ ಗ್ರಾಪಂಗಳ ಗ್ರಂಥಪಾಲಕರು ಕಡ್ಡಾಯವಾಗಿ ಮತ ಹಾಕುವುದಲ್ಲದೆ ಇತರರಿಗೂ ಮತ ಹಾಕುವಂತೆ ಪ್ರೇರೇಪಿಸಬೇಕೆಂದು ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ತಿಳಿಸಿದರು.
ಅವರು ತಾಪಂಯಲ್ಲಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಪಂಗಳ ಗ್ರಂಥಪಾಲಕರಿಗೆ ಮತದಾನ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮತದಾನದ ಮಾತನಾಡಿದರು.
ಮತದಾನ ಎಂಬುವುದು ಹಬ್ಬವಿದ್ದಂತೆ, ಅದನ್ನು ನಾವು ಸಂಭ್ರಮಿಸಬೇಕು. ಉತ್ತಮ ನಾಯಕನನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಮತದಾರನ ಮೇಲಿದೆ. ಈಗಾಗಲೇ ವ್ಯಾಟ್ಸಪ್ ಗ್ರೂಪ್ ಮಾಡಿ ಚುನಾವಣೆ ಆಯೋಗದಿಂದ ಬರುವ ಸೂಚನೆಗಳು, ಮಾರ್ಗದರ್ಶನ ಹಾಗೂ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳ ಮಾಹಿತಿಗಳನ್ನು ಹಾಕಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಧನಂಜಯ ಮೇದೂರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಚುನಾವಣಾ ಆಯೋಗ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂಗವಿಕಲರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದರು. ತಾಪಂ ಕಚೇರಿ ಅಧೀಕ್ಷಕಿ ಕೆ.ಆರ್.ಮಧು, ತಾಪಂ ಸಿಬ್ಬಂದಿ, ಪುನರ್ವಸತಿ ಕಾರ್ಯಕರ್ತರು, ತಾಲೂಕಿನ ಎಲ್ಲ ಗ್ರಾಪಂಗಳ ಗ್ರಂಥಾಲಯದ ಗ್ರಂಥಪಾಲಕರು ಭಾಗವಹಿಸಿದ್ದರು.