'ಭೋಲಾ ಶಂಕರ್' ನಿರ್ಮಾಪಕರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ ಕೋರ್ಟ್!

Untitled design - 2023-08-10T204254.939
Published on

ಆಂಧ್ರಪ್ರದೇಶ: ಮೆಗಾಸ್ಟಾರ್​ ಚಿರಂಜೀವಿ ನಟನೆಯ ಬಹುನಿರೀಕ್ಷಿತ 'ಭೋಲಾ ಶಂಕರ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಸಿನಿಮಾ ರಿಲೀಸ್​ ಮಾಡದಂತೆ ವಿತರಕರೊಬ್ಬರು ವೈಜಾಗ್‌​ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದ್ರೆ, ಕೋರ್ಟ್​ ಈ ಕೇಸ್​ ಅನ್ನು ಇಂದು ವಜಾಗೊಳಿಸುವ ಮೂಲಕ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟಿದೆ.

'ಭೋಲಾ ಶಂಕರ್' ಚಿತ್ರವನ್ನು ಆಗಸ್ಟ್ 11, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದ್ರೆ, ಈ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ್ದ ವಿತರಕರೊಬ್ಬರು, ಕೆಲವು ದಿನಗಳ ಹಿಂದೆಯಷ್ಟೇ ಸಿನಿಮಾ ಬಿಡುಗಡೆಯನ್ನು ತಡೆಯುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿತರಕರು ಚಿತ್ರದ ನಿರ್ಮಾಪಕರರೊಂದಿಗೆ ಹಣಕಾಸಿನ ಸಮಸ್ಯೆಗಳನ್ನು ಹೊಂದಿದ್ದರು. ಹಾಗಾಗಿ ತಮಗೆ ಕೊಡಬೇಕಾದ ಬಾಕಿ ಮೊತ್ತವನ್ನು ಮೊದಲು ನೀಡಲಿ ಎಂದು ಕೋರ್ಟ್​ಗೆ ತಿಳಿಸಿದ್ದರು.

ಎ.ಕೆ. ಎಂಟರ್‌ಟೈನ್‌ಮೆಂಟ್ಸ್ ವಿರುದ್ಧದ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ವಿಷಯಗಳನ್ನು ಇದೀಗ ಯಶಸ್ವಿಯಾಗಿ ಬಗೆಹರಿಸಲಾಗಿದೆ. ಈ ಪ್ರಕರಣವನ್ನು ಕೋರ್ಟ್​ ವಜಾಗೊಳಿಸಿದೆ ಎಂದು ಚಿತ್ರ ತಯಾರಕರು ಇದೀಗ ಅಧಿಕೃತವಾಗಿ ಘೋಷಿಸಿದ್ದಾರೆ.

ಸಿನಿಮಾ ಬಿಡುಗಡೆಯಾಗಲಿದೆಯಾ? ಎಂಬ ಗೊಂದಲದಲ್ಲಿದ್ದ ಚಿರಂಜೀವಿ ಅಭಿಮಾನಿಗಳಿಗೆ ಇದೀಗ ಸಂತಸ ಉಂಟಾಗಿದ್ದು, ತಮ್ಮ ನೆಚ್ಚಿನ ನಟನ ಚಿತ್ರವನ್ನು ಪರದೆಯ ಮೇಲೆ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಮೆಹರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net