

ಆಂಧ್ರಪ್ರದೇಶ: ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತು ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಖುಷಿ’ ಚಿತ್ರದ ಟ್ರೇಲರ್ ಇದೀಗ ಸಿನಿಪ್ರೇಕ್ಷಕರ ಮುಂದೆ ಹಾಜರಾಗಿದ್ದು, ಟ್ರೇಲರ್ ನೋಡಿದ ಸಿನಿಪ್ರಿಯರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೆಪ್ಟಂಬರ್ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಶಿವ ನಿರ್ವಾಣ ನಿರ್ದೇನದ ‘ಖುಷಿ’ ಟ್ರೇಲರ್, ಚಿತ್ರ ರೋಮ್ಯಾಂಟಿಕ್-ಡ್ರಾಮಾ ಜಾನರ್ ಒಳಗೊಂಡಿರುವುದನ್ನು ತಿಳಿಸುವುದರ ಜತೆಗೆ ನವಿರಾದ ಪ್ರೇಮ ಕಥೆಯನ್ನು ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ಅರ್ಥೈಸುವ ಪ್ರಯತ್ನವು ಟ್ರೇಲರ್ನಲ್ಲಿ ಉತ್ತಮವಾಗಿ ಮೂಡಿಬಂದಿದೆ.
ಎರಡು ಕುಟುಂಬಗಳ ನಡುವೆ ನಡೆಯುವ ವಿರೋಧಗಳು ಮತ್ತು ಪ್ರೀತಿಸಿದ ಜೋಡಿಗಳು ಮದುವೆಯಾದ ನಂತರ ಹುಟ್ಟಿಕೊಳ್ಳುವ ಮನಸ್ತಾಪಗಳು ಹೇಗೆಲ್ಲಾ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತದೆ ಎಂಬುದನ್ನು ಚಿತ್ರತಂಡ ಟ್ರೇಲರ್ನಲ್ಲಿ ಉತ್ತಮವಾಗಿ ತೋರಿಸಿದೆ. ಜಗಳದ ನಂತರ ಇಬ್ಬರು ತೆಗೆದುಕೊಳ್ಳುವ ನಿರ್ಧಾರವೇನು? ಮುಂದೇನು? ಎಂಬುದನ್ನು ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ತಿಳಿಯಬೇಕಿದೆ.
ಟ್ರೇಲರ್ ನೋಡಿದ ಸಿನಿಪ್ರೇಕ್ಷಕರು ಸಮಂತಾ-ವಿಜಯ್ ದೇವರಕೊಂಡ ಜೋಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಕಾಮೆಂಟ್ ಮೂಲಕ ಶುಭಹಾರೈಸಿದ್ದಾರೆ.(ಏಜೆನ್ಸೀಸ್).