‘ಕಾಂತಾರ 2’ ಯಾವಾಗ ಶುರು? ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಜಿ

rishab
Published on

ಕನ್ನಡದ ‘ಕಾಂತಾರ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ‘ಕಾಂತಾರ 2’ ಘೋಷಿಸಿದ್ದು, ಇದು ಪ್ರೀಕ್ವಲ್ ಆಗಿರಲಿದೆ ಎಂದಿತ್ತು. ‘ಕಾಂತಾರ’ದಲ್ಲಿ ನಡೆದ ಕಥೆಗೂ ಮುನ್ನ ಏನೆಲ್ಲಾ ನಡೆಯಿತು ಎಂಬುದರ ದರ್ಶನ ಮಾಡಿಸಲಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹೀಗಾಗಿ ‘ಕಾಂತಾರ 2’ ಘೋಷಣೆ ಆದಾಗಿನಿಂದ ಸಿನಿಮಾ ಯಾವಾಗ ಶುರು ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅದಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಕಥೆ ಪೂರ್ಣಗೊಂಡಿವೆ. ಸಾಮಾನ್ಯವಾಗಿ ಎರಡು, ಮೂರು ಕರಡು ಪ್ರತಿಗಳನ್ನು ಮಾಡಿಕೊಳ್ಳುತ್ತೇವೆ. ಕಲಾವಿದರ ಆಯ್ಕೆ, ಲೊಕೇಷನ್ ಹುಡುಕಾಟ, ಬರವಣಿಗೆಯ ಕೆಲಸಗಳೂ ಏಕಕಾಲದಲ್ಲಿ ನಡೆಯುತ್ತಿವೆ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್‌ನತ್ತ ನಮ್ಮ ಗಮನವಷ್ಟೇ. ಆದರೆ, ಯಾವಾಗ ಶುರು ಎಂಬುದನ್ನು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಅವರೇ ಅಧಿಕೃತವಾಗಿ ಘೋಷಣೆ ಮಾಡಬೇಕು. ಆ ಬಳಿಕ ನಾವು ಚಿತ್ರೀಕರಣಕ್ಕೆ ಹೊರಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ. ಪ್ರಿ-ಪ್ರೊಡಕ್ಷನ್ ಕೆಲಸದ ಜತೆಗೆ ಖುದ್ದು ರಿಷಬ್ ಸಹ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರ ಕುರಿತು ಮುಂದಿನ ದಿನಗಳಲ್ಲಿ ಹೇಳೀಕೊಳ್ಳುತ್ತಾರಂತೆ.

ಪರಭಾಷೆಗಳಲ್ಲೂ ಬಂದಿವೆ ಆರ್ಸ್
‘ಕಾಂತಾರ’ ಸಕ್ಸಸ್ ರಿಷಬ್ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್‌ಡಂ ನೀಡಿದೆ. ಹೀಗಾಗಿಯೇ ಪರಭಾಷೆಗಳಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆಯಂತೆ. ಆದರೆ, ‘ನನಗೆ ಈಗ ‘ಕಾಂತಾರ 2’ ಮೊದಲ ಆದ್ಯತೆ. ಈ ಚಿತ್ರಕ್ಕೆ ಮೊದಲು ಇಷ್ಟು ದೊಡ್ಡ ಸಕ್ಸಸ್ ಕೊಟ್ಟಿದ್ದು ಕನ್ನಡಿಗರು. ಅವರು ನೀಡಿದ ಸಕ್ಸಸ್ ಇದು. ಹೀಗಾಗಿಯೇ ಬೇರೆ ಭಾಷೆಗಳಿಂದ ಹಠಾತ್ತಾಗಿ ಅವಕಾಶ ನೀಡಿದರು ಅಂತ ಓಡಿ ಹೋಗುವುದಿಲ್ಲ. ಬೇರೆ ಭಾಷೆಯ ತಂತ್ರಜ್ಞರು ಕನ್ನಡಕ್ಕೆ ಬಂದು, ಇಲ್ಲಿನ ಕಂಟೆಂಟ್ ವಿಶ್ವಾದ್ಯಂತ ತೆಗೆದುಕೊಂಡು ಹೋಗುತ್ತಾರೆ ಅಂದರೆ ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ನನಗೆ ಮೊದಲ ಆದ್ಯತೆ ಕನ್ನಡ ಸಿನಿಮಾ. ‘ಕಾಂತಾರ’ ಮುಗಿದ ಬಳಿಕ ಬೇರೆ ಪ್ರಾಜೆಕ್ಟ್‌ಗಳ ಬಗ್ಗೆ ಯೋಚಿಸಲಿದ್ದೇನೆ’ ಎನ್ನುತ್ತಾರೆ ರಿಷಬ್ ಶೆಟ್ಟಿ.

ಆರ್‌ಆರ್‌ಆರ್ ಒಗ್ಗಟ್ಟಿನ ಮಂತ್ರ
ಇತ್ತೀಚೆಗಷ್ಟೆ ರಾಜ್ ಬಿ. ಶೆಟ್ಟಿ ನಟಿಸಿರುವ ‘ಟೋಬಿ’ ಚಿತ್ರದ ಟ್ರೇಲರ್ ಬಿಡುಗಡೆಗೆಯಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ವೇದಿಕೆ ಹಂಚಿಕೊಂಡಿದ್ದರು. ಜತೆಗೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ, ಬಹುತೇಕ ಹೊಸಬರೇ ನಟಿಸಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೂ ರಕ್ಷಿತ್, ರಿಷಬ್ ಮತ್ತು ರಾಜ್ ತಮ್ಮದೇ ರೀತಿಯಲ್ಲಿ ಬೆಂಬಲಿಸಿದ್ದರು. ಇದೀಗ ಮತ್ತೆ ‘ಟೋಬಿ’ಗಾಗಿ ಒಂದಾಗಿರುವ ಬಗ್ಗೆ, ‘‘ಟೋಬಿ’ಗಾಗಿ ರಕ್ಷಿತ್, ನಾನು, ರಾಜ್ ಒಟ್ಟಿಗೆ ಬಂದಿದ್ದೇವೆ. ನಾವು ಮೂರು ಜನ ಮಾತ್ರವಲ್ಲ, ಇಡೀ ಚಿತ್ರರಂಗವೇ ಒಂದಾಗಿ ಬಂದು ಪ್ರತಿ ಸಿನಿಮಾಗಳ ಜತೆ ನಿಲ್ಲಬೇಕಿದೆ. ಒಂದು ಚಿತ್ರದ ಜತೆ ಚಿತ್ರರಂಗದವರು ನಿಂತಾಗ ಮಾತ್ರ ಅದು ಹೆಚ್ಚಿನ ಜನರಿಗೆ ತಲುಪಲು ಸಾಧ್ಯ’ ಎಂದು ಹೇಳಿಕೊಳ್ಳುತ್ತಾರೆ ರಿಷಬ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net