ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್​ನಿಂದ ಹಿಂದೆ ಸರಿದ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ!

Vivek Ramaswamy
Published on

ವಾಷಿಂಗ್ಟನ್​: ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ ಅವರು 2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಣೆ ಮಾಡಿದ್ದಾರೆ.

ಅಮೆರಿಕದಲ್ಲಿ ಈಗಾಗಲೇ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ನಿನ್ನೆ (ಜ.15) ಅಯೋವಾ ಕ್ಷೇತ್ರದಲ್ಲಿ ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೆಲುವು ಸಾಧಿಸಿದ ಬೆನ್ನಲ್ಲೇ 38 ವರ್ಷದ ವಾಣಿಜ್ಯೋದ್ಯಮಿ ವಿವೇಕ್​ ರಾಮಸ್ವಾಮಿ ಅವರು ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ವಿವೇಕ್​ ರಾಮಸ್ವಾಮಿ ಅವರು ಜೈವಿಕ ತಂತ್ರಜ್ಞಾನದ ಉದ್ಯಮಿಯಾಗಿದ್ದು, ಅಯೋವಾದಲ್ಲಿ ಸೋಲುಂಡಿದ್ದಾರೆ. ಇದೇ ಬೇಸರದಲ್ಲಿ ತಮ್ಮ ರಿಪಬ್ಲಿಕ್ಷನ್​ ನಾಮನಿರ್ದೇಶನದ ಪ್ರಚಾರಕ್ಕೆ ಕೊನೆಯಾಡಿದ್ದಾರೆ.

ಇಡೀ ಪ್ರಚಾರವು ನಿಜವನ್ನು ಮಾತನಾಡುವುದಾಗಿತ್ತು. ಆದರೆ, ಈ ರಾತ್ರಿ ನಾವು ನಮ್ಮ ಗುರಿಯನ್ನು ಸಾಧಿಸಲು ಆಗಲಿಲ್ಲ. ಶ್ವೇತಭವನದಲ್ಲಿ ಅಮೆರಿಕ ದೇಶಭಕ್ತರ ಅಗತ್ಯವಿದೆ. ತಮಗೆ ಬೇಕಾದವರ ಬಗ್ಗೆ ಜನರು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದ್ದಾರೆ. ಈ ರಾತ್ರಿ ನಾನು ನನ್ನ ಪ್ರಚಾರವನ್ನು ಸಸ್ಪೆಂಡ್​ ಮಾಡುತ್ತಿದ್ದೇನೆ. ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದು ಮತ್ತು ಅವರು ಮುಂದಿನ ಯುಎಸ್ ಅಧ್ಯಕ್ಷ ಎಂದು ಖಚಿತಪಡಿಸಿಕೊಳ್ಳಲು ನಾನು ಎಲ್ಲ ಪ್ರಯತ್ನವನ್ನು ಮಾಡುತ್ತೇನೆ. ನನಗೆ ಈ ತಂಡ, ಈ ಚಳುವಳಿ ಮತ್ತು ನಮ್ಮ ದೇಶದ ಬಗ್ಗೆ ಅಪಾರ ಹೆಮ್ಮೆ ಇದೆ ಎಂದು ವಿವೇಕ್​ ರಾಮಸ್ವಾಮಿ ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಸೋಮವಾರ ಅಯೋವಾದಲ್ಲಿ ನಡೆದ ಮೊದಲ 2024 ರಿಪಬ್ಲಿಕನ್ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಟ್ರಂಪ್ ಅದ್ಭುತ ಜಯ ಸಾಧಿಸಿದ್ದಾರೆ. ವಿವೇಕ್​ ಅವರು ಟ್ರಂಪ್​ಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಟ್ರಂಪ್​ ಗೆಲುವಿನ ಹಿನ್ನೆಲೆ ಅವರಿಗೆ ಕರೆ ಮಾಡಿ ಅಭಿನಂದನೆ ಸಹ ಸಲ್ಲಿಸಿದ್ದಾರೆ.

ಅಯೋವಾ ಕ್ಷೇತ್ರದಲ್ಲಿ ಟ್ರಂಪ್​ ಮೊದಲ ಸ್ಥಾನ ಪಡೆದರೆ, ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಂಪ್ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದರು. ಡಿಸಾಂಟಿಸ್ 23,000 ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಹೇಲಿ 20,000 ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಮತ್ತು ರಾಮಸ್ವಾಮಿ ಕೇವಲ 8,000 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಯಾರು ಈ ವಿವೇಕ್ ರಾಮಸ್ವಾಮಿ?

ಚೈತನ್ಯ ತುಂಬಿದ 37 ವರ್ಷದ ಯುವಕ ವಿವೇಕ್ ರಾಮಸ್ವಾಮಿ ಅವರು ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಇವರ ತಂದೆ-ತಾಯಿ ರಾಮಸ್ವಾಮಿ ಮತ್ತು ಗೀತಾ ಕೇರಳದಿಂದ ಕೆಲವು ದಶಕಗಳ ಹಿಂದೆ ಅಮೆರಿಕದ ಓಹೈವೋ ರಾಜ್ಯಕ್ಕೆ ವಲಸೆ ಬಂದಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಅತ್ಯಂತ ಪ್ರತಿಭಾವಂತರಾದ ವಿವೇಕ್ ಪ್ರತಿಷ್ಠಿತ ಹಾರ್ವರ್ಡ್ ಮತ್ತು ಯೇಲ್ ಯುನಿವರ್ಸಿಟಿಗಳಿಂದ ಡಿಗ್ರಿ ಪಡೆದಿದ್ದಾರೆ. ಈಗಾಗಲೇ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮಿಯಾಗಿ ವಿವೇಕ್ ಅವರು ಬಹುದೊಡ್ಡ ಯಶಸ್ಸನ್ನು ಕಂಡಿದ್ದಾರೆ. ಇವರು ಫಾರ್ಮಸಿಟಿಕಲ್ ಕಂಪನಿ ರೊಯ್ವೆಂಟ್ ಸೈನ್ಸಸ್ (Roivant Sciences) ಮೆಡಿಕೇರ್ ನೇವಿಗೇಷನ್ ಕಂಪನಿ ಚಾಪ್ಟರ್ ಮೆಡಿಕೇರ್​ ಮತ್ತು ಸಾಫ್ಟ್​ವೇರ್​ ಹಾಗೂ ನೆಟ್​ವರ್ಕ್​ ಕಂಪನಿ ಕ್ಯಾಂಪಸ್ ವೆಂಚರ್ ನೆಟ್​ವರ್ಕ್ ಸ್ಥಾಪಿಸಿದ್ದಾರೆ. ಇವರ ಬಗ್ಗೆ ಪ್ರತಿಷ್ಠಿತ ಫೋರ್ಬ್ಸ್​ ಮ್ಯಾಗಜಿನ್ ಲೇಖನ ಪ್ರಕಟಿಸಿತ್ತು. ವಿವೇಕ್ ಅವರ ಪತ್ನಿ ಹೆಸರು ಅಪೂರ್ವ ತಿವಾರಿ ಮತ್ತು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net