More

    ಸೋದರನ ವಿರುದ್ಧ ಸೋದರಿ ಅಖಾಡಾಕ್ಕೆ: ಆಂಧ್ರದಲ್ಲಿ ಶರ್ಮಿಳಾ ನೇಮಕದಿಂದ ಕಾಂಗ್ರೆಸ್​ ಲಾಭವಾಗುವುದೇ?

    ಹೈದರಾಬಾದ್: ಆಂಧ್ರಪ್ರದೇಶದ ಮಾಜಿ (ವಿಭಜನೆಪೂರ್ವ) ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಹಾಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರನ್ನು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

    “ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ವೈ,ಎಸ್, ಶರ್ಮಿಳಾ ರೆಡ್ಡಿ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಹಿ ಮಾಡಿರುವ ಪ್ರಕಟಣೆ ತಿಳಿಸಿದೆ.

    ಹಿಂದಿನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರುದ್ರರಾಜು ಸೋಮವಾರ ರಾಜೀನಾಮೆ ನೀಡಿದ್ದಾರೆ. ಅವರನ್ನು ಪಕ್ಷದ ಅತ್ಯುನ್ನತ ನಿರ್ಣಯ ಮಾಡುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.

    ಶರ್ಮಿಳಾ ಈ ತಿಂಗಳಷ್ಟೇ ಕಾಂಗ್ರೆಸ್‌ಗೆ ಸೇರಿದ್ದಾರೆ, 2024 ರ ಲೋಕಸಭೆ ಚುನಾವಣೆಗೆ ಕೆಲ ವಾರಗಳು ಮತ್ತು ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಾಗ ಶರ್ಮಿಳಾ ಅವರು ತಮ್ಮ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​ನಲ್ಲಿ ವಿಲೀನಗೊಳಿಸಿದ್ದಾರೆ. ಅವರು ಜನವರಿ 4ರಂದು ಕಾಂಗ್ರೆಸ್​ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಈಚೆಗೆ ಜರುಗಿದ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅವರು ಬೆಂಬಲಿಸಿದ್ದರು.

    ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದು ತಮ್ಮ ತಂದೆಯ ಕನಸಾಗಿತ್ತು ಎಂದು ಶರ್ಮಿಳಾ ಹೇಳಿದ್ದಾರೆ.

    ಶರ್ಮಿಳಾ ಅವರು ರಾಜ್ಯ ಕಾಂಗ್ರೆಸ್ ನೇತೃತ್ವ ವಹಿಸುವುದು ಆಂಧ್ರಪ್ರದೇಶ ಚುನಾವಣೆಯಲ್ಲಿ ಅವರ ಸಹೋದರ ಜಗನ್ ಮೋಹನ್ ರೆಡ್ಡಿ ಮತ್ತು ಆಡಳಿತಾರೂಢ ವೈಎಸ್​ಆರ್​ಸಿಪಿಯನ್ನು ಸೋಲಿಸಲು ಅನುಕೂಲ ಮಾಡಿಕೊಡಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್​ನದ್ದಾಗಿದೆ. ಕಾಂಗ್ರೆಸ್​ ಪಕ್ಷವು ದಕ್ಷಿಣದ ರಾಜ್ಯಗಳ ಹೆಚ್ಚಿನ ಗಮನ ನೀಡುತ್ತಿದೆ. ದಕ್ಷಿಣದಲ್ಲಿ ಹೆಚ್ಚಿನ ಯಶಸ್ಸನ್ನು ಕಾಂಗ್ರೆಸ್​ ಈಗಾಗಲೇ ಗಳಿಸಿದೆ.

    ಕಳೆದ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೆ, ನವೆಂಬರ್‌ನಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿಯನ್ನು ಪದಚ್ಯುತಗೊಳಿಸಿ ಆ ರಾಜ್ಯದಲ್ಲಿ ಅಧಿಕಾರಕ್ಕೆ ಏರಿದೆ. ರಾಷ್ಟ್ರೀಯ ಚುನಾವಣೆಯ ಜತೆಗೆ ಈ ವರ್ಷ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶದಲ್ಲಿ ಕೂಡ ಇದೇ ರೀತಿಯ ಪ್ರಬಲ ಪ್ರದರ್ಶನವನ್ನು ನೀಡುವ ಉತ್ಸಾಹ ಕಾಂಗ್ರೆಸ್​ನದ್ದಾಗಿದೆ.

    ಆದರೆ, 2019ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಶೇ. 50ಕ್ಕಿಂತ ಅಧಿಕ ಮತಗಳನ್ನು ಬಾಚಿಕೊಂಡಿದೆ. ಹೀಗಾಗಿ, ಶರ್ಮಿಳಾ ನೇಮಕದಿಂದ ಕಾಂಗ್ರೆಸ್​ ಎಷ್ಟು ಲಾಭವಾಗುತ್ತದೆ ಎಂಬುದಕ್ಕೆ ಚುನಾವಣೆ ನಂತರವೇ ಉತ್ತರ ದೊರೆಯಲಿದೆ.

    ರಾಜ್ಯ ರಚನೆಯ ಆಂದೋಲನದ ಹಿನ್ನೆಲೆಯಲ್ಲಿ ಜಗನ್​ ಮೋಹನ್​ ರೆಡ್ಡಿ ಅವರು ಕಾಂಗ್ರೆಸ್‌ನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಸ್ಥಾಪಿಸಿ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಒಂಬತ್ತು ವರ್ಷಗಳ ನಂತರ ಶರ್ಮಿಳಾ ಅವರು ತನ್ನ ಸಹೋದರನಿಂದ ದೂರ ಸರಿದು ವೈಎಸ್ಆರ್ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts