More

    ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಬೇಗ ಮಾಡಿ

    ಶಿರಸಿ: ಅಂಕೋಲಾ-ಹುಬ್ಬಳ್ಳಿ ಮತ್ತು ತಾಳಗುಪ್ಪ-ಹೊನ್ನಾವರ ರೈಲು ಮಾರ್ಗಗಳ ಅಗತ್ಯತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ ಹೇಳಿದರು.
    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಎರಡು ದಶಕ ಕಳೆದರೂ ಪೂರ್ಣಗೊಂಡಿಲ್ಲ. ಕೇವಲ ಕಲಘಟಗಿವರೆಗಿನ ಭಾಗ ಮಾತ್ರ ಭಾಗಶಃ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 30 ವರ್ಷಗಳ ಕಾಲ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಪ್ರಧಾನಿ ಮೋದಿ ಅವರ ಗಮನಕ್ಕೆ ತರಬೇಕಿತ್ತು ಎಂದರು.
    ಅರಣ್ಯ ಹಕ್ಕುಗಳ ಕಾಯ್ದೆ ತಿದ್ದುಪಡಿಯಲ್ಲಿ ಹಲವಾರು ಸಮಸ್ಯೆಗಳಿವೆ. ವಿಶೇಷವಾಗಿ ಸಾಂಪ್ರದಾಯಿಕ ಅರಣ್ಯ ನಿವಾಸಿಗಳಿಗೆ ಹಕ್ಕುಗಳ
    ಗುರುತಿಸುವಿಕೆಗೆ ಸಂಬಂಧಿಸಿದಂತೆ ಗೊಂದಲಗಳಿವೆ. ಅನೇಕ ಅತಿಕ್ರಮಣದಾರರಿಗೆ ಅರಣ್ಯ ಹಕ್ಕುಗಳನ್ನು ನೀಡಲಾಗಿಲ್ಲ. ಅರಣ್ಯ ಭೂಮಿಯ ಅತಿಕ್ರಮಿಸಿರುವ ಬಗ್ಗೆ ಮೂರು ತಲೆಮಾರಿನ ಅವಲಂಬನೆಯನ್ನು ಸಾಬೀತುಪಡಿಸಲು ಹೆಣಗಾಡುತ್ತಿದ್ದಾರೆ. ನಾವು ಹಿರಿಯರ ಹೇಳಿಕೆ ಪಡೆದು ಅದನ್ನು ದಾಖಲೆಯಾಗಿ ಕಳಿಸುತ್ತಿದ್ದರೂ ಕೇಂದ್ರ ಸರ್ಕಾರ ಅದನ್ನು ಮಾನ್ಯ ಮಾಡುತ್ತಿಲ್ಲ. ಅತಿಕ್ರಮಣದಾರರು ಸಾಕ್ಷ್ಯವನ್ನು ಒದಗಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆಯಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದರು.
    ಕೈಗಾ ಮತ್ತು ಸೀ ಬರ್ಡ್ ಯೋಜನೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಆದರೆ, ಹುದ್ದೆಗಳನ್ನು ಅಖಿಲ ಭಾರತ ಮಟ್ಟದಲ್ಲಿ ಪ್ರಚಾರ ಮಾಡಿದ್ದರಿಂದ ಸ್ಥಳೀಯರು ಅವಕಾಶ ವಂಚಿತರಾಗುತ್ತಿದ್ದಾರೆ. ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಮಂಗಳೂರು ಮತ್ತು ಮಡಗಾಂವ್ ನಡುವೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ. ಕಾರವಾರದಿಂದ ಭಟ್ಕಳವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2014ರಲ್ಲಿ ಆರಂಭಿಸಿದ್ದು, ಅದು ಕೂಡ ಈವರೆಗೂ ಮುಕ್ತಾಯವಾಗಿಲ್ಲ. ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆಗಾಗಿ ದಶಕಗಳಿಂದ ಕಾಯುತ್ತಿವೆ. ಕುಣಬಿ ಮತ್ತು ಹಾಲಕ್ಕಿ ಸಮುದಾಯದವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಲು ಎಲ್ಲ ಅರ್ಹತೆಗಳಿವೆ. ರಾಜ್ಯ ಸರ್ಕಾರವು ಅಗ್ತಯ ದಾಖಲೆಗಳನ್ನು ಸಲ್ಲಿಸಿದೆ. ಇದು ಭಾರತ ಸರ್ಕಾರದ ಬಳಿ ಬಾಕಿ ಉಳಿದಿದೆ ಎಂಬುದನ್ನು ಉಲ್ಲೇಖಿಸಿದ್ದೇನೆ ಎಂದರು.
    ಸೀ ಬರ್ಡ್ ಯೋಜನೆಯ ಎರಡನೇ ಹಂತದಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಿಸಲು ಒಪ್ಪಂದವಾಗಿತ್ತು. ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಅಂಕೋಲಾದ ನಾಗರಿಕ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳಿಗೆ ಚಾಲನೆ ತ್ವರಿತಗೊಳಿಸುವುದು ಅತ್ಯಂತ ಅವಶ್ಯವಿದೆ. ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ ಮತ್ತು ಭಟ್ಕಳದಂತಹ ಪ್ರಮುಖ ಸ್ಥಳಗಳಲ್ಲಿ ಬಂದರು ಅಭಿವೃದ್ಧಿ ಪಡಿಸುವುದು ಅವಶ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದರು.
    ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ರವೀಂದ್ರನಾಥ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts