

ಬೆಂಗಳೂರು: ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ 34 ಸಾವಿರ ದೇವಾಲಯಗಳ ಮೇಲ್ವಿಚಾರಣೆ ಮಾಡುತ್ತಿರುವ ಮುಜರಾಯಿ ಇಲಾಖೆ, ತನ್ನ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿಗಾಗಿ ‘ವಿಷನ್ ಗ್ರೂಪ್’ ಹಾಗೂ ಸಾರ್ವಜನಿಕರಿಗೆ ದೇಗುಲಗಳ ಮಾಹಿತಿ ಒದಗಿಸಲು ‘ಕಾಲ್ ಸೆಂಟರ್’ ಆರಂಭಕ್ಕೆ ಮುಂದಾಗಿದೆ.
ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದನ್ನು ವಿಷನ್ ಗ್ರೂಪ್ ಕೇಂದ್ರೀಕರಿಸಲಿದ್ದು, ದೇಗುಲಗಳ ಜೀಣೋದ್ಧಾರ ಹಾಗೂ ಸ್ಥಳ ಅಭಿವೃದ್ಧಿಗೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್ಆರ್)ನಿಧಿ ಹೊಂದಿಸುವ ದಾರಿಯನ್ನು ಸುಗಮಗೊಳಿಸಲಿದೆ. ಈ ಸಂಬಂಧ 10 - 12 ಸದಸ್ಯರನ್ನು ಒಳಗೊಂಡ ವಿಷನ್ ಗ್ರೂಪ್ನ ರೂಪುರೇಷೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಇಲಾಖೆ ತೊಡಗಿಕೊಂಡಿದೆ.
ಸದಸ್ಯರ ನೇಮಕ: ವಿಷನ್ ಗ್ರೂಪ್ನ ಸದಸ್ಯರನ್ನಾಗಿ ನೇಮಿಸಲು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿ ಪ್ರಮುಖರನ್ನು ಸಂರ್ಪಸಲು ಸರ್ಕಾರ ಮುಂದಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲ್ಸೆಂಟರ್: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ನೆರವಾಗಲು ಕಾಲ್ಸೆಂಟರ್ ಪ್ರಾರಂಭಿಸಲಾಗುತ್ತಿದೆ. ಈ ಸೆಂಟರ್ ದೇವಾಲಯಗಳ ಎಲ್ಲ ಸಂಭಾವ್ಯ ಮೂಲ ವಿವರಗಳನ್ನು ಒದಗಿಸುತ್ತದೆ. ಉದಾಹರಣೆಗೆ ದೇವಾಲಯದ ದರ್ಶನದ ಸಮಯ, ಅಭಿಷೇಕ, ವಿಶೇಷ ಪೂಜೆ ಮತ್ತು ಅಲಂಕಾರ, ಅಮಾವಾಸ್ಯೆ ಹಾಗೂ ಪೌರ್ಣಮಿಯ ವಿಶೇಷತೆಗಳು, ದೇವಾಲಯಗಳ ವಿಳಾಸ, ಅಲ್ಲಿಗೆ ತಲುಪಲು ಮಾರ್ಗ ನಕ್ಷೆ, ಸಾರಿಗೆ ಸಂಪರ್ಕ ಮಾಹಿತಿ ಪಡೆಯಲು ಭಕ್ತರು ಕಾಲ್ ಸೆಂಟರ್ ಸಂರ್ಪಸಬಹುದಾಗಿದೆ.
ಸಾಫ್ಟ್ವೇರ್ ಸಿದ್ಧತೆ: ಕಾಲ್ಸೆಂಟರ್ನಲ್ಲಿ 10 ಮಂದಿ ನಿಯೋಜಿಸಲು ನಿರ್ಧರಿಸಲಾಗಿತ್ತು. ಇದನ್ನು ಹೊರಗುತ್ತಿಗೆ ಅಥವಾ ಕಿಯೋನಿಕ್ಸ್ ಇಲ್ಲವೆ ರಾಜ್ಯದ ಐಟಿ ಏಜೆನ್ಸಿಯೊಂದಕ್ಕೆ ನೀಡಲು ಯೋಚಿಸಲಾಗಿದೆ. ಪ್ರತಿ ದೇವಾಲಯದಲ್ಲಿ ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೆ ವಿವರ ಸಂಗ್ರಹಿಸಿ ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ. ಪ್ರಸ್ತುತ ಸಾಫ್ಟ್ವೇರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ ತಿಳಿಸಿದರು.
ದೇವಾಲಯಗಳ ಅಭಿವೃದ್ಧಿಗಾಗಿ ರೂಪಿಸುತ್ತಿರುವ ‘ವಿಷನ್ ಗ್ರೂಪ್’ನ ಸದಸ್ಯರಾಗಲು ಉದ್ಯಮಿಗಳನ್ನು ಸಂರ್ಪಸುವ ಕಾರ್ಯ ನಡೆಯುತ್ತಿದೆ. ದೇವಾಲಯದ ಕುರಿತು ಮಾಹಿತಿ ನೀಡಲು ಸ್ಥಾಪಿಸಲಿರುವ ಕಾಲ್ಸೆಂಟರ್ನ ಸಂಪೂರ್ಣ ಪ್ರಕ್ರಿಯೆ 45 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. | ಎಚ್. ಬಸವರಾಜೇಂದ್ರ ಆಯುಕ್ತ, ಮುಜರಾಯಿ ಇಲಾಖೆ
ನವರಾತ್ರಿ ಪ್ರಯುಕ್ತ ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಅ.19ರ ಗುರುವಾರ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. ನಾಡಿನಲ್ಲಿ ಮಳೆ ಬೆಳೆ ಸಮೃದ್ಧವಾಗಿ ಆಗಲಿ ಎಂದು ಪ್ರಾರ್ಥಿಸಿ ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ಕುಂಕುಮಾರ್ಚನೆ ನೆರವೇರಿಸಲು ಸೂಚಿಸಲಾಗಿದೆ. ಪ್ರತಿ ವರ್ಷ ಆಶ್ವಯುಜ ಮಾಸದ ಮೊದಲ ದಿನದಿಂದ ನವಮಿಯವರೆಗೆ ಶಕ್ತಿ ದೇವತೆಗಳ ಆರಾಧನೆ ಮಾಡಲಾಗುತ್ತದೆ. ಅದರಂತೆ ಲಲಿತಾ ಪಂಚಮಿ ದಿನವಾದ ಗುರುವಾರ ವಿಶೇಷ ದಿನವಾಗಿದೆ. ಈ ವಿಶೇಷ ದಿನದಂದು ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧವಾದ ಬೆಳೆ ಆಗಲಿ ಹಾಗೂ ಸಕಲ ಜೀವರಾಶಿಗೂ ಒಳಿತಾಗಲೆಂದು ಸಂಕಲ್ಪ ಮಾಡುವ ಮೂಲಕ ಕುಂಕುಮಾರ್ಚನೆ ಮಾಡುವಂತೆ ತಿಳಿಸಿದೆ. ಅಂದು ಕುಂಕುಮಾರ್ಚನೆ ನಡೆಸಲು ಸಾಧ್ಯವಾಗದಿದ್ದಲ್ಲಿ ಅ.22ರ ದುರ್ಗಾಷ್ಠಮಿ ದಿನದಂದು ನಡೆಸಬೇಕು. ಈ ಕುರಿತು ಭಕ್ತರ ಮಾಹಿತಿಗಾಗಿ ದೇವಸ್ಥಾನಗಳ ಸೂಚನಾ ಫಲಕದಲ್ಲಿ ಮಾಹಿತಿ ಒದಗಿಸುವಂತೆ ಆಯುಕ್ತರು ಸೂಚಿಸಿದ್ದಾರೆ.