ಶೃಂಗಸಭೆಗೆ ಟ್ರಂಪ್​ ಗೈರು; ಸ್ವಯಂ ಘೋಷಿತ ವಿಶ್ವಗುರು ಖಂಡಿತವಾಗಿ ಭಾಗವಹಿಸುತ್ತಾರೆ ಎಂದ ಜೈರಾಮ್​ ರಮೇಶ್​ | G20 Summit

Jairam Ramesh Narendra Modi)
Published on

ದೆಹಲಿ: ಮುಂಬರುವ ಜಿ20 ಶೃಂಗಸಭೆಯನ್ನು (G20 Summit) ಬಹಿಷ್ಕರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 'ಸ್ವಯಂ ಘೋಷಿತ ವಿಶ್ವಗುರು ' ಈ ಸಭೆಯಲ್ಲಿ ಖುದ್ದಾಗಿ ಭಾಗವಹಿಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್​ ನಾಯಕ ರಮೇಶ್​ ನವೆಂಬರ್ 22-23 ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಟ್ರಂಪ್ ಘೋಷಿಸಿರುವುದರಿಂದ, ಸ್ವಯಂ ಘೋಷಿತ ವಿಶ್ವಗುರು ಸ್ವತಃ ತಾವೇ ಆ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ನಾವು ಖಚಿತವಾಗಿ ಹೇಳಬಹುದು ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿ ರೈತರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದ ಟ್ರಂಪ್​, ಅಮೆರಿಕದ ಯಾವುದೇ ಸರ್ಕಾರಿ ಅಧಿಕಾರಿ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಜೈರಾಮ್​ ರಮೇಶ್​ರಿಂದ ಈ ಟ್ವೀಟ್​ ಬಂದಿದೆ.

ಕೌಲಾಲಂಪುರದಲ್ಲಿ ನಡೆದ 22 ನೇ ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಕ್ಕಾಗಿ ಜೈರಾಮ್​ ರಮೇಶ್, ಪ್ರಧಾನಿ ಮೋದಿಯನ್ನು ಟೀಕಿಸಿದ್ದರು , ಅಮೆರಿಕದೊಂದಿಗಿನ ಭಾರತದ ವ್ಯಾಪಾರ ವಿವಾದದ ಮಧ್ಯೆ ಟ್ರಂಪ್ ಅವರೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಲು ಅವರು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ವರ್ಚುವಲ್ ಆಗಿ ಭಾಗವಹಿಸಿದರು, ಭಾರತದಲ್ಲಿ ನಡೆಯುತ್ತಿರುವ ದೀಪಾವಳಿ ಹಬ್ಬಗಳೇ ಇದಕ್ಕೆ ಕಾರಣ ಎಂದು ಉಲ್ಲೇಖಿಸಿದರು.

ಜಿ20 ಶೃಂಗಸಭೆಯಿಂದ ಅಮೆರಿಕ ದೂರ

ನವೆಂಬರ್ 22 ಮತ್ತು 23 ರಂದು ನಡೆಯಲಿರುವ ಗ್ರೂಪ್ ಆಫ್ 20 ಶೃಂಗಸಭೆಯಲ್ಲಿ ಯಾವುದೇ ಅಮೇರಿಕನ್ ಸರ್ಕಾರಿ ಅಧಿಕಾರಿ ಭಾಗವಹಿಸುವುದಿಲ್ಲ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ . ಜಿ20 ಶೃಂಗಸಭೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವುದು  ನಾಚಿಕೆಗೇಡಿನ ಸಂಗತಿ. ಡಚ್, ಫ್ರೆಂಚ್ ಮತ್ತು ಜರ್ಮನ್ ವಸಾಹತುಗಾರರಿಂದ ಬಂದ ಆಫ್ರಿಕನ್ನರನ್ನು ಕೊಲ್ಲಲಾಗುತ್ತಿದೆ ಮತ್ತು ಅವರ ಭೂಮಿಯನ್ನು ಅಕ್ರಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಸರ್ಕಾರವು ಬಿಳಿ ರೈತರ ವಿರುದ್ಧ ಹಿಂಸೆ ಮತ್ತು ತಾರತಮ್ಯ ನಡೆಯಲು ಅವಕಾಶ ಕೊಡುತ್ತಿದೆ ಎಂದು ಟ್ರಂಪ್ ಈ ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ, ಆದರೆ ಆಫ್ರಿಕಾ ಮೂಲಗಳು ಈ ಆರೋಪವನ್ನು ತಳ್ಳಿಹಾಕುತ್ತಲೇ ಬಂದಿದ್ದು, ವರ್ಣಭೇದ ನೀತಿ ಕೊನೆಗೊಂಡ ದಶಕಗಳ ನಂತರವೂ, ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಹೆಚ್ಚಿನ ಕಪ್ಪು ದಕ್ಷಿಣ ಆಫ್ರಿಕನ್ನರಿಗಿಂತ, ಬಿಳಿ ನಾಗರಿಕರು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ಶೃಂಗಸಭೆಗಳು

2014 ರಲ್ಲಿ ಪ್ರಧಾನಿಯಾದಾಗಿನಿಂದ, ಪ್ರಧಾನಿ ಮೋದಿ ಬ್ರಿಸ್ಬೇನ್, ಅಂಟಲ್ಯ, ಹ್ಯಾಂಗ್‌ಝೌ, ಹ್ಯಾಂಬರ್ಗ್, ಬ್ಯೂನಸ್ ಐರಿಸ್, ಒಸಾಕಾ, ರಿಯಾದ್ (ಕೋವಿಡ್ ಕಾರಣದಿಂದಾಗಿ ವರ್ಚುವಲ್), ರೋಮ್, ಬಾಲಿ ಮತ್ತು ನವದೆಹಲಿ ಸೇರಿದಂತೆ ಎಲ್ಲಾ ಜಿ 20 ಶೃಂಗಸಭೆಗಳಲ್ಲಿ ಭಾಗವಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net