

ದೆಹಲಿ: ನವೆಂಬರ್ 14 ರಂದು ಫಲಿತಾಂಶ ಹೊರ ಬಂದು ಬಿಹಾರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಆಗ ವಿರೋಧ ಪಕ್ಷದ ಮಹಾಮೈತ್ರಿಕೂಟವನ್ನು ಸೇರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ಓವೈಸಿ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ನಮ್ಮ ಮೊದಲ ಆದ್ಯತೆಯಾಗಿದ್ದು, ನವೆಂಬರ್ 14 ರಂದು ಏನಾಗಲಿದೆ ಎನ್ನುವುದರ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ, ಫಲಿತಾಂಶ ಅತಂತ್ರ ವಿಧಾನಸಭೆಯ ಪರವಾಗಿ ಬಂದರೆ ಆಗ ನಮ್ಮ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದರು.
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಓವೈಸಿ ಪಕ್ಷ 19 ಸ್ಥಾನಗಳಲ್ಲಿ ಸ್ಪರ್ಧಿಸಿ ಮುಸ್ಲಿಂ ಬಾಹುಳ್ಯವಿರುವ ಸೀಮಾಂಚಲ್ ಪ್ರದೇಶದಲ್ಲಿನ ಐದು ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ಇದಾದ ಬಳಿಕ ಎಐಎಂಐಎಂ ನಾಲ್ವರು ಶಾಸಕರು ಆರ್‌ಜೆಡಿ ಸೇರ್ಪಡೆಗೊಂಡರು. ಬಿಹಾರದ ಇತಿಹಾಸದಲ್ಲಿಯೇ ಮೊದಲ ಬಾರಿ ದಾಖಲೆ ಎಂಬಂತೆ ಶೇ. 64.66 ರಷ್ಟು ಮತದಾನವವಾಗಿದ್ದು, ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಓವೈಸಿ ಪಕ್ಷ ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಓವೈಸಿ, ಅವರೆಲ್ಲಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಈ ವಿಷಯವಾಗಿ ತಮ್ಮೊಂದಿಗೆ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದರು.
ಮಹಾಮೈತ್ರಿಕೂಟದ ನಾಯಕರು ನಮ್ಮ ಪಕ್ಷವನ್ನು ಬಿಜೆಪಿ ಬೀ ಟೀಮ್, ಮುಸ್ಲಿಂ ಮತ ಒಡೆಯಲು ನಾವು ಇಲ್ಲಿ ಸ್ಪರ್ಧೆ ನಡೆಸುತ್ತಿದ್ದೇವೆ ಎಂದು ಕರೆಯಲಿ ತೊಂದರೆ ಇಲ್ಲ, ಆದರೆ ನರೇಂದ್ರ ಮೋದಿ ಹೇಗೆ ಮೂರು ಬಾರಿ ಪ್ರಧಾನಿಯಾದರು ಎನ್ನುವುದರ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ? ಅದು ಯಾರ ಜವಾಬ್ದಾರಿ? ಒಂದು ಪಕ್ಷ, ಮೈತ್ರಿಕೂಟ 450-500 ಸ್ಥಾನಗಳಲ್ಲಿ ಸ್ಪರ್ಧಿಸಿ ಮೂರು ಬಾರಿ ಸೋತರೆ, ನೀವು ಇತರರನ್ನು ಏಕೆ ದೂಷಿಸುತ್ತಿದ್ದೀರಿ? ಇಂತಹ ಆರೋಪ ಮಾಡುವ ಮುನ್ನ ಅವರು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎಂದು ಕಿಡಿ ಕಾರಿದರು.
ವಿರೋಧ ಪಕ್ಷದ ಮೈತ್ರಿಕೂಟದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಕಾಂಗ್ರೆಸ್ ಮತ್ತು ಎಡಪಕ್ಷಗಳು ಪ್ರಮುಖ ಘಟಕಗಳಾಗಿವೆ. ಮತ್ತೊಂದೆಡೆ, ಎನ್‌ಡಿಎಯಲ್ಲಿ ಬಿಜೆಪಿ, ಜನತಾದಳ (ಯುನೈಟೆಡ್), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಸೇರಿವೆ.(ಏಜೆನ್ಸೀಸ್)