ಮಾಸ್​ ಅವತಾರದಲ್ಲಿ ಧೂಳೆಬ್ಬಿಸಲಿದ್ದಾರೆ ವಿಕ್ರಮ್​ ರವಿಚಂದ್ರನ್​...

Manu nag
Published on

ಈಗಾಗಲೇ ತ್ರಿವಿಕ್ರಮ ಸಿನಿಮಾ ಮೂಲಕ ಸುದ್ದಿಯಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್​ ಅವರ ಕಿರಿ ಮಗ ವಿಕ್ರಮ್​ ರವಿಚಂದ್ರನ್​, ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದು, ರಗಡ್​ ಅವತಾರದಲ್ಲಿ ಎದುರಾಗಲಿದ್ದಾರೆ.

ಕನ್ನಡ ಮತ್ತು ಮಲಯಾಳಂ ಸಿನಿಮಾ ಇಂಡಸ್ಟ್ರಿಯ ನಂಟಿರುವ ನಿರ್ದೇಶಕ ಮನು ನಾಗ್​ ಈ ಸಿನಿಮಾ ನಿರ್ದೇಶಿಸಲಿದ್ದು, ಕನ್ನಡದಲ್ಲಿ ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ ಆಗಿದೆ. ಈ ಹಿಂದೆ ವೈಟ್ ಅನ್ನೋ ಸಾಮಾಜಿಕ ಕಳಕಳಿಯ ಕಿರುಚಿತ್ರ ನಿರ್ದೇಶಿಸಿದ್ದ ಮನು, ಆ ಕಿರುಚಿತ್ರದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರಿಂದ ನಿರೂಪಣೆ ಮಾಡಿಸಿದ್ದರು.

ಇದೀಗ ಮೊದಲ ಬಾರಿ ಮಾಸ್​ ಮತ್ತು ತಾಯಿ ಸೆಂಟಿಮೆಂಟ್​ ಇರುವ ಕಥೆ ಆಯ್ದುಕೊಂಡಿದ್ದು, ಈಗಾಗಲೇ ಕಥೆ ಬರೆದು ಮುಗಿಸಿದ್ದಾರೆ. ಸದ್ಯದ ಅಪ್​ಡೇಟ್​ ಮಾಹಿತಿ ಪ್ರಕಾರ ಚಿತ್ರೀಕರಣ ಪೂರ್ವ ಕೆಲಸಗಳಿಗೆ ಚಾಲನೆ ನೀಡಿರುವ ನಿರ್ದೇಶಕ ಮನು, ನಾಯಕನನ್ನು ಅಂತಿಮ ಮಾಡಿದ್ದಾರೆ.

ಚೆನ್ನೈ ಮೂಲದ ನಿರ್ಮಾಪಕರೊಬ್ಬರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಇನ್ನುಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಸಿನಿಮಾಕ್ಕಾಗಿ ವಿಕ್ರಮ್​ ದೇಹವನ್ನು ಕಟ್ಟುಮಸ್ತಾಗಿ ಬಿಲ್ಡ್ ಮಾಡಿಕೊಳ್ಳಲಿರುವುದರಿಂದ ಮುಂದಿನ ನಾಲ್ಕು ತಿಂಗಳ ಬಳಿಕವೇ ಸಿನಿಮಾ ಸೆಟ್ಟೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net