

ನಿರ್ದೇಶಕ ಸಂತೋಷ್ಗೆ ಕಾಲೇಜ್ ಕಥೆಗಳೆಂದರೆ ಅದೇನೋ ಇಷ್ಟ. ಅವರ ಮೊದಲ ಚಿತ್ರ 'ಸ್ಟೂಡೆಂಟ್ಸ್', ಕಾಲೇಜ್ ಕಥೆಯಾಗಿತ್ತು. ಎರಡನೆಯ ಚಿತ್ರ 'ಬಿಂದಾಸ್ ಗೂಗ್ಲಿ' ಸಹ ಇದೇ ಹಾದಿಯಲ್ಲಿತ್ತು. ಈಗ ಅವರು ಮೂರನೆಯ ಚಿತ್ರವನ್ನು ಘೋಷಿಸಿದ್ದು, ಅದೂ ಸಹ ಕಾಲೇಜ್ ಕ್ಯಾಂಪಸ್ ಸುತ್ತ ಸುತ್ತುವ ಚಿತ್ರವಂತೆ.
'ಕ್ಯಾಂಪಸ್ ಕ್ರಾಂತಿ' ಚಿತ್ರವು ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆಯಂತೆ. ಅದಕ್ಕೂ ಮುನ್ನ, ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಸಂತೋಷ್. ಲಾಕ್ಡೌನ್ ಸಮಯದಲ್ಲಿ ಕುಳಿತು ಚಿತ್ರದ ಕಥೆ-ಚಿತ್ರಕಥೆಯನ್ನು ಸಿದ್ಧಪಡಿಸಿರುವ ಅವರು, ಇದೀಗ ಶೂಟಿಂಗ್ ಹೊರಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ.
ಚಿತ್ರದ ಹೆಸರೇ ಹೇಳುವಂತೆ ಕಾಲೇಜಿನಲ್ಲಾಗುವ ಕ್ರಾಂತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಬಾರ್ಡರ್ನಲ್ಲಿ ನಡೆಯುವ ಒಂದು ಘಟನೆ ಇಟ್ಟುಕೊಂಡು, ಅದಕ್ಕೆ ಕಾಲೇಜ್ ಹುಡುಗರು ಹೇಗೆ ಕಾರಣವಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಕಾಲೇಜ್ ಹುಡುಗರು ಈ ಕ್ರಾಂತಿಗೆ ಕಾರಣವಾಗುವುದರಿಂದ, ಚಿತ್ರಕ್ಕೆ ಕ್ಯಾಂಪಸ್ ಕ್ರಾಂತಿ ಎಂಬ ಹೆಸರನ್ನು ಇಡಲಾಗಿದೆ.
ಹಿಂದಿನ ಚಿತ್ರಗಳಂತೆ, ಈ ಚಿತ್ರಗಳು ಒಂದಿಷ್ಟು ಹೊಸಬರು ಇದ್ದಾರೆ. ಅದರಲ್ಲೂ ಆರ್ಯ, ಆರತಿ ಮತ್ತು ಸಹನಾ ಗೌಡ ಎಂಬ ಹೊಸ ನಾಯಕ-ನಾಯಕಿಯರನ್ನು ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಹೊರಟಿದ್ದಾರೆ. ಮಿಕ್ಕಂತೆ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ.
ಈಗಾಗಲೇ ಲಾಕ್ಡೌನ್ ಮುಗಿದ ನಂತರ, ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೆಲಸಗಳನ್ನು ಮುಗಿಸಲಾಗಿದೆ. ಚಿತ್ರಕ್ಕೆ ವಿ. ಮನೋಹರ್ ಸಂಗೀತ ಸಂಯೋಜಿಸುತ್ತಿದ್ದು, ನಾಲ್ಕು ಹಾಡುಗಳನ್ನು ಈಗಾಗಲೇ ರೆಕಾರ್ಡ್ ಮಾಡಲಾಗಿದೆ.
'ಕ್ಯಾಂಪಸ್ ಕ್ರಾಂತಿ' ಚಿತ್ರದ ಚಿತ್ರೀಕರಣವು ಬೆಂಗಳೂರಲ್ಲದೆ ಗೋಕಾಕ್, ದೂಧ್ ಸಾಗರ್ ಮುಂತಾದ ಹಲವು ಕಡೆಗಳಲ್ಲಿ ನಡೆಯಲಿದೆ.