

ಬೆಂಗಳೂರು: ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಈ ಯಾತ್ರೆಗೆ ಇಲ್ಲ ಎಂದು CM ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇದನ್ನೂ ಓದಿ:
ವಿಜಯೇಂದ್ರ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಜನಾಕ್ರೋಶ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ನಾನು ಶುಭ ಕೋರುತ್ತೇನೆ. ಒಂದು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವೈಫಲ್ಯ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಮನೆಮುರುಕುತನದ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯದ ಜನರ ಮನಸ್ಸು ಅರಿಯಲು ಈ ಯಾತ್ರೆ ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ ಪಕ್ಷವನ್ನು ರಾಜ್ಯ ಎಂದೂ ಕಂಡಿಲ್ಲ. ಸ್ವಪಕ್ಷೀಯರೇ ಆರೋಪಿಸುವಂತೆ ‘’ಪೇಮೆಂಟ್ ಸೀಟ್’’ ನಲ್ಲಿ ಕೂತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ? ನಮ್ಮನ್ನು ಪ್ರಶ್ನಿಸುವ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಶಾಸಕ ಮಿತ್ರರು ಕಳೆದೆ ಎರಡು ವರ್ಷಗಳಿಂದ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ದಮ್ಮು ತಾಕತ್ ತೋರಿಸಲಿ ಎಂದು ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ.
ವೈಯಕ್ತಿಕವಾಗಿ ನಾನು ರಾಜ್ಯದಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಸಮರ್ಥ ವಿರೋಧ ಪಕ್ಷ ಇರಬೇಕೆಂದು ಬಯಸುವವನು. ಬಿಜೆಪಿಯವರಂತೆ ರಾಜ್ಯ ಬಿಜೆಪಿ ಮುಕ್ತ ಆಗಬೇಕೆಂದು ಬಯಸುವಷ್ಟು ಕೆಟ್ಟ ಮನಸ್ಸು ನನಗಿಲ್ಲ. ನಮ್ಮ ಆಡಳಿತದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿದ್ದರೆ ಅದನ್ನು ನಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯವಾಗಿದೆ. ಆದರೆ ರಾಜ್ಯದಲ್ಲಿರುವ ವಿರೋಧ ಪಕ್ಷ ತನ್ನ ಒಳಜಗಳ ಮತ್ತು ಅಸಾಮರ್ಥ್ಯದಿಂದ ರಾಜ್ಯದ ಜನತೆ ಎದುರು ನಗೆಪಾಟಲಿಗೀಡಾಗಿದೆ ಎಂದಿದ್ದಾರೆ.