

Supreme Court : ವಜಾಗೊಂಡಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಜತೆ ಇರುತ್ತೇನೆ ಹೊರತು ಸುಪ್ರೀಂಕೋರ್ಟ್ ತೀರ್ಪು ಅನ್ನು ನಾನು ಒಪ್ಪಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವ ಮೂಲಕ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ 25,000 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಕೆಲಸ ಕಳೆದುಕೊಂಡ ಶಿಕ್ಷಕರನ್ನು ಮಮತಾ ಬ್ಯಾನರ್ಜಿ ಸೋಮವಾರ ಭೇಟಿಯಾದ ಸಂದರ್ಭದಲ್ಲಿ ಈ ಹೇಳಿಕೆ ಹೊರ ಬಿದ್ದಿದೆ.
2016ರ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ(WBSSC) ಶಾಲಾ ಉದ್ಯೋಗದ ಹಗರಣಗಳ ಆರೋಪದ ಮೇಲೆ ನೇಮಕಾತಿ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶಕ್ಕೆ ಸಂಬಂಧಿಸಿದಂತೆ ಇದೇ ಏ.3ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ತೀರ್ಪು ಅನ್ನು ನಾನು ಒಪ್ಪಲ್ಲ. ಈ ನನ್ನ ನಿಲುವಿಗಾಗಿ ನನ್ನನ್ನು ಅವರು ಜೈಲಿಗೆ ಹಾಕಬಹುದು. ನಮ್ಮ ಸರ್ಕಾರ ನಿಮ್ಮ ಪರವಾಗಿ ನಿಂತಿದೆ. ನಾವು ಈ ನಿರ್ಧಾರ(ತೀರ್ಪು)ವನ್ನು ಒಪ್ಪಿಕೊಂಡಿದ್ದೇವೆ ಎಂದು ಭಾವಿಸಬೇಡಿ. ನಿಮ್ಮ ದುಖದಿಂದಾಗಿ ನಮ್ಮ ಹೃದಯ ನೋವು ಅನುಭವಿಸುತ್ತದೆ ಎಂದಿದ್ದಾರೆ.
ಇದನ್ನು ಹೇಳಿದ್ದಕ್ಕಾಗಿ ಅವರು ನನ್ನನ್ನು ಜೈಲಿಗೆ ಹಾಕಬಹುದು. ಆದರೆ, ನನಗೆ ಅದು ಮುಖ್ಯವಲ್ಲ. ಯಾರಾದರೂ ತೊಂದರೆಯಲ್ಲಿದ್ದಾಗ ಯಾರು ಕೆಂಪು, ಬಿಳಿ, ಹಳದಿ ಅಥವಾ ಹಸಿರು ಎಂದು ನಾವು ನೋಡಬೇಕಾಗಿಲ್ಲ. ನಾವು ಅವರ ಪಕ್ಕದಲ್ಲಿ ನಿಲ್ಲಬೇಕು. ಅವರಿಗೆ ಅರ್ಹವಾದ ಘನತೆ ಮತ್ತು ಗೌರವವನ್ನು ಪುನಃಸ್ಥಾಪಿಸುವ ಜವಾಬ್ದಾರಿಯನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ" ಎಂದು ಹೇಳಿದರು.(ಏಜೆನ್ಸೀಸ್)