ವಾರ ಭವಿಷ್ಯ: ಯಾರಿಗೂ ಅಂಜುವುದು ಬೇಡ, ಇನ್ನೊಬ್ಬರ ತಟ್ಟೆಯ ಎಂಜಲು ಬೇಡ, ಗುರು ಕಾಪಾಡುತ್ತಾನೆ

Vara-Bhavishya-2
Published on
Web 1

ಮೇಷ: ಸೂರ್ಯ, ಅಂಗಾರಕನು ಅಷ್ಟಮದಲ್ಲಿ ಇದ್ದು ಕೆಲಸಕಾರ್ಯಗಳಲ್ಲಿ ಕೆಲವೊಂದು ಅಡೆತಡೆ ಉಂಟಾಗಬಹುದು. ಬಯಸಿದ ವಸ್ತು ಸಮಯಕ್ಕೆ ಸಿಗದೆ ನಿಮ್ಮ ಮನಸ್ಸು ಮುದುಡಿಕೊಳ್ಳುವ ಸಂದರ್ಭ ಬರುತ್ತದೆ. ಮೇಷದಲ್ಲಿ ಗುರು ಇದ್ದಾನೆ. ಗುರುವಿನ ಪ್ರಾರ್ಥನೆಯಿಂದ ಕೆಲಸ ಸಾಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಗಾರಕನ ಮನೆಯಾಗಿರುವುದರಿಂದ ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ ಇಷ್ಟಾರ್ಥ ಕಂಡುಕೊಳ್ಳಿ.

ವೃಷಭ: ಏಕಾದಶದಲ್ಲಿ ರಾಹು ಇದ್ದು ಗುರು 12ರಲ್ಲಿ ಇದ್ದರೂ, ರಾಹುವು ಗುರುವಿನ ಮನೆಯಲ್ಲಿ ಇರುವುದರಿಂದ ಷಣ್ಮುಖನನ್ನು ಪ್ರಾರ್ಥಿಸಿ. ಇದರಿಂದ ನಿಮಗೆ ಅಡ್ಡಿ, ಆತಂಕಗಳು ದೂರವಾಗುತ್ತವೆ. ಗುರು 12ರಲ್ಲಿ ಇದ್ದು, ಕಷ್ಟಗಳ ಸಂಕೋಲೆಗಳಿಂದ ಹೊರಬರಲು ಗುರುದತ್ತಾತ್ರೇಯನನ್ನು ಪೂಜಿಸಿ, ಪ್ರಾರ್ಥಿಸಿ. ಶುಭವಾಗುವುದು.

ಮಿಥುನ: 11ರ ಗುರು ಏನನ್ನೂ ಕೊಡಬಲ್ಲನು. 9ರ ಶನಿ ಹಾದು ಹೋಗ ಬೇಕಾದ ದಾರಿಗೆ ಕರೆದೊಯ್ಯುತ್ತಾನೆ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಯಾರಿಗೂ ಕೇಡು ಬಯಸದೆ ಇದ್ದರೆ, ಕಾರ್ಯಗಳಲ್ಲಿ ಗೆಲುವು ನಿಮ್ಮದೇ. ಚಕ್ರರೂಪಿ ವಿಷ್ಣು ಪೂಜಿಸಿ. ವೆಂಕಟೇಶ್ವರನನ್ನು ಅನಂತವಾಗಿ ಭಜಿಸಿ. ಒಳ್ಳೆಯದಾಗುತ್ತದೆ.

ಕಟಕ: ಅಷ್ಟಮ ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಅಲ್ಪಸ್ವಲ್ಪ ಶರೀರಬಾಧೆ ಕೊಟ್ಟು ಕೆಲವು ಸಮಸ್ಯೆಗಳನ್ನು ಉಂಟು ಮಾಡಿದರೂ ದಶಮ ಗುರುವನ್ನು ಪ್ರಾರ್ಥಿಸಿದರೆ ನಿಮ್ಮ ವಿಷಯದಲ್ಲಿ ಯಾವುದೇ ಅಹಿತಕರ ಘಟನೆಯೂ ನಡೆಯುವುದಿಲ್ಲ. ಹರಿಯು ಕೊಟ್ಟ ದೇಹವನ್ನು ಹರನೇ ಕಾಪಾಡಿ, ಬ್ರಹ್ಮಲಿಖಿತವನ್ನು ಸ್ಪಷ್ಟ ಅಕ್ಷರದಲ್ಲಿ ಬರೆದು ನಡೆಸುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರರ ಐಕ್ಯರೂಪವಾದ ಗುರು ದತ್ತಾತ್ರೇಯನನ್ನು ಪೂಜಿಸಿದರೆ ನಿಮ್ಮ ಆರೋಗ್ಯ ಸ್ಥಿರವಾಗಿ ಶರೀರಬಾಧೆ ದೂರವಾಗುತ್ತದೆ. ಉಮಾಮಹೇಶ್ವರ ವ್ರತದ ಕಥಾ ಸಾರಾಂಶ ಓದಿ. ಬಿಲ್ವಪತ್ರೆಯಿಂದ ಶಿವನಿಗೆ ಅರ್ಚನೆ ಮಾಡಿ.

ಸಿಂಹ: ಯುಗಾದಿ ಹಬ್ಬದಂದು ಬೇವು-ಬೆಲ್ಲದ ರುಚಿ ಸವಿದಿರುತ್ತೀರಿ. ನಿಮ್ಮನ್ನು ಅಷ್ಟದಿಕ್ಕಿನಲ್ಲಿ ಸಂರಕ್ಷಿಸಲು 9ರಲ್ಲಿ ಇರುವ ಗುರು ಒಬ್ಬನೇ ಸಾಕು. ನಿಮ್ಮ ಕೆಲಸ ಈಡೇರಿಸುತ್ತಾನೆ. ಕೆಲಸ ನಿಧಾನವಾದರೂ ನಿರ್ಲಕ್ಷ್ಯ ಬೇಡ. ಬರುವ ಧನ ಬಾರದೇ ಇರಬಹುದು, ಪ್ರಯತ್ನ ಮುಂದುವರಿಸಿ. ಗುರು ನರಸಿಂಹನನ್ನು ಪ್ರಾರ್ಥಿಸಿ. ನಿಮ್ಮ ಸವಾಲುಗಳಿಗೆ ಬೇಕಾದ ತುಷ್ಟಿ-ಪುಷ್ಟಿಯನ್ನು ಕೊಟ್ಟು ಮುನ್ನಡೆಸುತ್ತಾನೆ.

ಕನ್ಯಾ: ಕನ್ಯಾ ರಾಶಿಯವರು ಚಂಚಲ ಮನಸ್ಸಿನವರು. ಏಕಾಗ್ರತೆ ಇಲ್ಲದಿದ್ದರೆ ಮಾನವ ಜೀವನ ವ್ಯರ್ಥ ವಾಗುತ್ತದೆ. ನಿಮಗೆ ಸಹಾಯ ಮಾಡಿದವರನ್ನು ಮರೆತು, ಬೇಕಾದವರನ್ನು ದೂರ ಮಾಡಿಕೊಂಡರೆ ಶನಿಯು ಸಪ್ತಮಕ್ಕೆ ಬಂದಾಗ ಪಾಠ ಕಲಿಸುತ್ತಾನೆ. ನಿಮ್ಮನ್ನು ಕೈಹಿಡಿದು ದಾರಿ ತೋರಿ ನಡೆಸುವವರನ್ನು ಎಂದೆಂದಿಗೂ ದೂರ ಮಾಡದೇ ಇರಿ. 6ರ ಶನಿಯಿಂದ ಲಾಭ ಗಳಿಸಿ. ಕೊಡಬೇಕಾದವರ ಋಣವನ್ನು ತೀರಿಸಿ. ಗುರುವು 9ಕ್ಕೆ ಬಂದಾಗ ನಿಮ್ಮನ್ನು ಪರಿಪೂರ್ಣವಾಗಿ ಸಂರಕ್ಷಣೆ ಮಾಡುತ್ತಾನೆ.

ತುಲಾ: ಸಂತೋಷ ಎಂಬುದು ಸಿಗುವ ವಸ್ತುವಲ್ಲ. ಸಂತೋಷ ಪಡಬೇಕಾದರೆ ಜೀವನದಲ್ಲಿ ನೀವು ಹಾಕಿಕೊಂಡ ಮೈಲಿಗಲ್ಲನ್ನು ಮುಟ್ಟಲು ಚಾಕಚಕ್ಯತೆ, ಧೈರ್ಯ, ಸಾಧಿಸುವ ಛಲ ಇರಬೇಕು. ಸಪ್ತಮದಲ್ಲಿ ಗುರು ಇದ್ದಾನೆ. ಯಾರಿಗೂ ಅಂಜುವುದು ಬೇಡ. ಇನ್ನೊಬ್ಬರ ತಟ್ಟೆಯ ಎಂಜಲು ಬೇಡ. ಗುರು ಕಾಪಾಡುತ್ತಾನೆ. ಶುದ್ಧ ವಿಚಾರಗಳಿರಲಿ. ಕೈ ಹಾಕಿದ ಕಾರ್ಯಗಳಲ್ಲಿ ಜಯ, ಸಂತಸ. ಅನೇಕ ಕಾಲ ನೀವು ಬಯಸದೆ ಹಣವೂ ಬಂದು ಸೇರುತ್ತದೆ. ನಿರಂತರವಾಗಿ ದುರ್ಗಾ ಪೂಜೆಯನ್ನು ಮಾಡಿ.

ವೃಶ್ಚಿಕ: ಧನಲಕ್ಷ್ಮಿ ಎಂಬ ಜಗನ್ಮಾತೆಯು ಧನ, ಕನಕ, ವಸ್ತು, ವಾಹನ ಎಲ್ಲವನ್ನೂ ಕೊಡಬಲ್ಲಳು. ಚತುರ್ಥದಲ್ಲಿ ಶನಿ ಇದ್ದರೂ ಪರವಾಗಿಲ್ಲ, ಜನ್ಮಜನ್ಮಾಂತರದ ಪುಣ್ಯ ಮತ್ತು ಈ ಜನ್ಮದಲ್ಲಿ ಮಾಡಿದ ಸುಬ್ರಹ್ಮಣ್ಯ ಪೂಜೆಯು ನಿಮ್ಮನ್ನು ನಾಗಾಲೋಟದಲ್ಲಿ ಓಡಿಸುತ್ತದೆ. ಭಂಡಾರ ತುಂಬಿ ಸುಖ ತರುತ್ತದೆ. ಪಳನಿ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಆಕಾಶವನ್ನೇ ಮುಟ್ಟಬಹುದು.

ಧನು: ಪಂಚಮದಲ್ಲಿ ಗುರು, 3ರಲ್ಲಿ ಶನಿ ಇರುವುದರಿಂದ ಯಾವುದೇ ಕಾರ್ಯವನ್ನೂ ಸಾಧಿಸಬಹುದು. ನಕಾರಾತ್ಮಕ ಚಿಂತನೆ ತೊಡೆದು ಹಾಕಿ, ಸಕಾರಾತ್ಮಕ ಚಿಂತನೆಯಿಂದ ಏನು ಮಾಡಿದರೂ, ಬಾಳು ಬಂಗಾರ ಆಗುತ್ತದೆ. ಜೀವನದ ಆಧಾರವಾಗಿರುವ ಕೆಲಸ ಕಾರ್ಯಗಳಿಂದ ಉಪಕಾರ ಮಾಡಿದ ಸಂತೃಪ್ತಿ, ಬೇಕಾದಷ್ಟು ಹಣ, ಪೂರ್ವಪುಣ್ಯದ ವಿಶೇಷದಿಂದ ಬಹುದೊಡ್ಡ ಸ್ಥಾನಮಾನ ಒದಗಿ ಬರಬಹುದು. ಗುರುಚರಿತ್ರೆ ಪಾರಾಯಣ ಬಿಟ್ಟರೆ ನಷ್ಟವಾಗುವುದು ನಿಮಗೆ. ಎಚ್ಚರದಿಂದ ಸಾಗಿರಿ.

ಮಕರ: ಶನಿ ಸಂಚಾರದಲ್ಲಿ ಯಾವತ್ತೂ ಕಷ್ಟ ಎಂಬುದಿಲ್ಲ. ಕಷ್ಟ-ನಷ್ಟ, ಆಗುಹೋಗುಗಳು, ಕೆಲಸ ನಿಧಾನ ಆಗುವುದು ಮುಂತಾದವುಗಳೆಲ್ಲ ಇದ್ದರೂ ಭಗವದ್ ಪ್ರಾರ್ಥನೆಯಿಂದ ಎಲ್ಲವನ್ನೂ ಜಯಿಸಿ ಸುಖ ಕಂಡುಕೊಳ್ಳಬಹುದು. ವಿಶೇಷವಾಗಿ ಶನಿ ದೇವರನ್ನು ಪೂಜಿಸಿ. ಶನಿ ಮಹಾತ್ಮನ ಕಥೆ ಓದಿದರೆ ದೇವರು ಸಂತೃಪ್ತನಾಗಿ ನಿಮ್ಮನ್ನು ಸುಗಮ ಹಾದಿಯಲ್ಲಿ ಕೊಂಡೊಯ್ಯುತ್ತಾನೆ. ಕರಿಎಳ್ಳು, ಎಳ್ಳೆಣ್ಣೆ ತುಪ್ಪವನ್ನು ದಾನ ಮಾಡಿದರೆ ಇಚ್ಛಿಸಿದ ಕಾರ್ಯಗಳು ದಡ ಸೇರುತ್ತವೆ.

ಕುಂಭ: ಜನ್ಮದಲ್ಲಿ ಶನಿ ಇದ್ದು ಸಾಕಷ್ಟು ತೊಂದರೆ ಆಗಿದ್ದರೂ ಅದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಿಮಗೆ ದೇವರು ಕೊಟ್ಟಿದ್ದಾನೆ. ಕಷ್ಟನಷ್ಟ ಬರುವುದು ಸರ್ವೆಸಾಮಾನ್ಯ. ‘ಎಂತಹ ಕಷ್ಟ ಬಂದರೂ ಸಹಿಸಲು ಶಕ್ತಿ ಕೊಡು, ನಿನ್ನ ಪಾದಾರವಿಂದಗಳಿಗೆ ನನ್ನ ಶಿರಸ್ಸಿತ್ತು ಪ್ರಾರ್ಥನೆ ಮಾಡುತ್ತೇನೆ. ಏನಾದರೂ ಆಗಿಹೋಗಲಿ, ಆದರೆ ದೈವಭಕ್ತಿ ಸದಾ ಇರಲಿ’ ಎಂಬ ಪ್ರಾರ್ಥನೆ ಇದ್ದರೆ, ದೇವರೇ ಒಲಿದು ತನ್ನ ಮಹಿಮೆಯನ್ನು ತೋರಿಸುತ್ತಾನೆ. ನಿಮ್ಮ ಕೈಹಿಡಿದು ನಡೆಸಿ ಸಿಂಹಾಸನದಲ್ಲಿ ಕೂರಿಸುತ್ತಾನೆ. ಗುರುಚರಿತ್ರೆಯ 43ನೇ ಅಧ್ಯಾಯದ ಅನಂತ ವ್ರತ ಕಥೆ ಓದಿದರೆ ಎಲ್ಲವೂ ಸರಿ ಹೋಗುತ್ತದೆ.

ಮೀನ: ಸುಖ ಬಂದಾಗ ಕಷ್ಟವನ್ನು ನೆನಪಿಸಿಕೊಳ್ಳುವುದು, ಕಷ್ಟ ಬಂದಾಗ ಸುಖವನ್ನು ಬಯಸುವುದು ಎರಡೂ ಮನುಷ್ಯನ ಮನಸ್ಸು ಮಾಡುವ ಮಹಾತಪ್ಪುಗಳು. ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವುದು ಮನುಷ್ಯಮಾತ್ರರಿಂದ ಆಗದಿರುವ ಕೆಲಸ. ನಿರಂತರವಾದ ಆತ್ಮ, ಪರಮಾತ್ಮನ ಸಂಧಾನ ಇದ್ದರೆ ಪರಮಾತ್ಮನೇ ಜೀವನದಲ್ಲಿ ಬೆಳಕನ್ನು ತರುತ್ತಾನೆ. ಅಧ್ಯಾತ್ಮ ರಾಮಾಯಣದ 3ನೇ ಸರ್ಗವನ್ನು ಓದಿ. ನಿಮ್ಮನ್ನು ನೀವು ತಿದ್ದಿಕೊಂಡು ಬದುಕಲು ಅನುಕೂಲವಾದ ಸಮಯ ಆಗುತ್ತದೆ. ಬುದ್ಧಿಗೆ ದೈವ ವೆಂಬ ಔಷಧವನ್ನು ಕೊಟ್ಟು 2ನೇ ಮನೆಯ ಗುರುವಿನ ಎಲ್ಲ ಶುಭವನ್ನು ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net