More

    275 ರೂ. ಶಾಲಾ ಶುಲ್ಕ ಪಾವತಿಸಲು ರೋಹಿತ್​ ಕುಟುಂಬಕ್ಕೆ ಸಾಧ್ಯವಾಗಲಿಲ್ಲ! ನಂತರ ನಡೆದಿದ್ದೆಲ್ಲ ಇತಿಹಾಸ

    ನವದೆಹಲಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ವೃತ್ತಿ ಜೀವನದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸುವ ಹಂತಕ್ಕೆ ಬಂದು ತಲುಪಿದ್ದಾರೆ. ಇನ್ನೊಂದು ಹೆಜ್ಜೆ ಬಾಕಿ ಇದ್ದು, ಅದರಲ್ಲಿ ಯಶಸ್ವಿಯಾದಲ್ಲಿ ವಿಶ್ವ ಕ್ರಿಕೆಟ್​ ಇತಿಹಾಸದಲ್ಲಿ ತಮ್ಮ ಸಾಧನೆಯ ಮುದ್ರೆಯನ್ನು ಒತ್ತಲಿದ್ದಾರೆ. ಆದರೆ, ಈ ಸಾಧನೆ ಹಿಂದೆ ರೋಹಿತ್ ಅವರ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ ಎಂಬುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಕ್ರಿಕೆಟ್​ ಆರಂಭದಿಂದ ವಿಶ್ವಕಪ್​ವರೆಗೂ ಅವರು ನಡೆದುಬಂದ ಹಾದಿ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ.

    ನಾಳೆ (ನ.19) ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಭಾರತ ಟ್ರೋಫಿಗಾಗಿ ಕಾದಾಡಲಿದ್ದು, ಮಹತ್ವದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಭಾರತದ ಪಾಲಿಗೆ ನಾಳೆ ಐತಿಹಾಸಿಕ ದಿನವಾಗಲಿದೆ. ಅಲ್ಲದೆ, ರೋಹಿತ್​ಗೂ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಲಿದೆ. ವಿಶ್ವಕಪ್​ನಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಫೈನಲ್​ ತಲುಪಿರುವ ಭಾರತ ಇತಿಹಾಸ ನಿರ್ಮಿಸುವ ಹೊಸ್ತಿಲಿನಲ್ಲಿದ್ದು, ಅಸಖ್ಯಾಂತ ಭಾರತೀಯರು ಭಾರತದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಬಲಗೈ ಆಟಗಾರನಾಗಿರುವ ರೋಹಿತ್​, ಅನೇಕ ವರ್ಷಗಳಿಂದ ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಆಧಾರಸ್ತಂಭವಾಗಿದ್ದಾರೆ ಮತ್ತು ವೈಟ್​ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇಲ್ಲಿಯವರೆಗೆ ರೋಹಿತ್ ಅನುಭವಿಸಿದ ಪ್ರಸಿದ್ಧ ವೃತ್ತಿಜೀವನವು ಒಂದು ಕಾಲ್ಪನಿಕ ಕಥೆಯಂತೆ ನಮಗೆ ಭಾಸವಾದರೂ ಅವರ ಸುದೀರ್ಘ ಪ್ರಯಾಣದ ಏರಿಳಿತಗಳನ್ನು ಮರೆಯುವಂತಿಲ್ಲ. 1999ರಲ್ಲಿ ರೋಹಿತ್​ ಜೀವನವನ್ನೇ ಬದಲಿಸಿದ ಸಮಸ್ಯೆಯೊಂದಿಗೆ ಅವರ ಸ್ಟಾರ್​ಡಮ್​ ಯುಗವು ಸಹ ಆರಂಭವಾಯಿತು.

    ರೋಹಿತ್​ ಆಫ್​ ಸ್ಪಿನ್ನರ್​
    ಶಾಲಾ ದಿನಗಳ ಟೂರ್ನಮೆಂಟ್​ಗಳಲ್ಲಿ ರೋಹಿತ್​ ಶರ್ಮ ಆಫ್​ ಸ್ಪಿನ್ನರ್​ ಆಗಿದ್ದರು. ಅವರ ಮನಮೋಹಕ ಪ್ರದರ್ಶನ ಕೋಚ್ ದಿನೇಶ್​ ಲಾಡ್​ ಅವರ ಗಮನ ಸೆಳೆಯಿತು. ಅಂದಹಾಗೆ ದಿನೇಶ್​ ಲಾಡ್​ ಅವರು ಮುಂಬೈ ಕ್ರಿಕೆಟರ್​ ಸಿದ್ಧೇಶ್​ ಲಾಡ್​ ಅವರ ತಂದೆ. ರೋಹಿತ್​ ಆಟದಿಂದ ಪ್ರಭಾವಿತರಾದ ದಿನೇಶ್​ ಲಾಡ್​, ಈತನಿಗೆ ಉತ್ತಮ ಭವಿಷ್ಯವಿದೆ ಎಂದು ಭಾವಿಸಿ ರೋಹಿತ್​ ಪಾಲಕರೊಂದಿಗೆ ಮಾತನಾಡಲು ಬಯಸಿದರು. ಆ ಸಮಯದಲ್ಲಿ ರೋಹಿತ್​, ಮುಂಬೈನ ಬೊರಿವಲಿ ಏರಿಯಾದಲ್ಲಿ ತಮ್ಮ ಅಂಕಲ್​ ಮತ್ತು ಅಜ್ಜ-ಅಜ್ಜಿಯ ಜತೆ ವಾಸವಿದ್ದರು. ರೋಹಿತ್​ ಅವರ ಅಂಕಲ್​ ದಿನೇಶ್​ ಲಾಡ್​ ಅವರನ್ನು ಭೇಟಿಯಾದಾಗ ರೋಹಿತ್​ರನ್ನು ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸುವಂತೆ ಒತ್ತಾಯ ಮಾಡಿದರು.

    275 ರೂ. ಶುಲ್ಕ
    ರೋಹಿತ್​ ಪ್ರಸ್ತುತ ಓದುತ್ತಿರುವ ಶಾಲೆಯಲ್ಲಿ 30 ರೂ. ಶುಲ್ಕವಿದೆ ಮತ್ತು ನೀವು ಹೇಳಿದಂತೆ ವಿವೇಕಾನಂದ ಶಾಲೆಗೆ ದಾಖಲಿಸಿ 275 ರೂ. ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ರೋಹಿತ್​ ಚಿಕ್ಕಪ್ಪ ನನ್ನೊಂದಿಗೆ ಹೇಳಿದರು. ಬಳಿಕ ಶಾಲೆಯ ನಿರ್ದೇಶಕರ ಬಳಿ ರೋಹಿತ್​ಗೆ ಸ್ಕಾಲರ್​ಶಿಫ್​ ನೀಡುವಂತೆ ಕೇಳಿಕೊಂಡೆ. ನನ್ನ ಜೀವನದಲ್ಲಿ ಸ್ಕಾಲರ್​ಶಿಫ್​ಗಾಗಿ ಮನವಿ ಮಾಡಿದ ಮೊದಲ ವಿದ್ಯಾರ್ಥಿ ರೋಹಿತ್​. ಈ ವಿದ್ಯಾರ್ಥಿಗೆ ನಾನ್ಯಾಕೆ ಸಹಾಯ ಮಾಡಬೇಕೆಂದು ನಿರ್ದೇಶಕರು ಕೇಳಿದರು. ಆದರೆ, ರೋಹಿತ್​ ಚೆನ್ನಾಗಿ ಕ್ರಿಕೆಟ್​ ಆಡುತ್ತಾನೆ ಮತ್ತು ಆತನಿಗೆ ಒಳ್ಳೆಯ ಭವಿಷ್ಯವಿದೆ ಎಂಬುದು ನನಗೆ ತಿಳಿದಿತ್ತು. ಹೀಗಾಗಿ ರೋಹಿತ್​ನನ್ನು ಸುಮ್ಮನೇ ಕಳುಹಿಸಲು ನನಗೆ ಇಷ್ಟವಿರಲಿಲ್ಲ ಎಂದು ದಿನೇಶ್​ ಲಾಡ್​ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

    ಕೊನೆಗೂ ದಿನೇಶ್​ ಲಾಡ್​ ಅವರ ಸಹಾಯದಿಂದ ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿದ ರೋಹಿತ್​, ದಿನೇಶ್ ಲಾಡ್ ಅವರ ಕೋಚಿಂಗ್ ಅಡಿಯಲ್ಲಿ ಕ್ರಿಕೆಟ್​ನಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದರಿಂದ ರೋಹಿತ್​ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ಪಡೆಯಿತು. ಅಂತಿಮವಾಗಿ ಹಿರಿಯರ ತಂಡಕ್ಕೆ ಪ್ರವೇಶಿಸುವ ಮೊದಲು U-19 ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ರೋಹಿತ್​ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಇಂದು ವಿಶ್ವಕಪ್​ ಗೆಲ್ಲುವ ಹಂತಕ್ಕೆ ರೋಹಿತ್​ ಬಂದಿದ್ದು, ಇನ್ನೊಂದು ಹೆಜ್ಜೆ ಇಡುವಲ್ಲಿ ಯಶಸ್ವಿಯಾದರೆ ರೋಹಿತ್​ ಕ್ರಿಕೆಟ್​ ಲೋಕದ ದಿಗ್ಗಜರ ಸಾಲಿಗೆ ಸೇರಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ನಯನತಾರ ಜನ್ಮದಿನ: ಕಥೆಯ ಸುಳಿವು ಕೊಟ್ಟ ‘ಟೆಸ್ಟ್’​ ಪೋಸ್ಟರ್​

    ‘ಅವನು ಈ ಆಟಕ್ಕೆ ಬಂದಿದ್ದಾನೇನು’…ಎಂದು ಸಲ್ಮಾನ್​ಗೆ ಕೇಳಿದ್ದೇಕೆ ನಟಿ ಅಂಕಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts