ಫೈನಲ್​ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್​ ಹೀಗಿತ್ತು…

Mayanti Langer
Published on

ನವದೆಹಲಿ: ಸುಸ್ಪಷ್ಟ ವಾಗ್ಝರಿ, ಆಕರ್ಷಕ ಧ್ವನಿ, ಗ್ಲಾಮರಸ್ ಲುಕ್ ಮತ್ತು ಆಟದ ಬಗೆಗಿನ ಅಪಾರ ಜ್ಞಾನದಿಂದಾಗಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಜನಪ್ರಿಯ ಟಿವಿ ನಿರೂಪಕಿ ಮಯಾಂತಿ ಲ್ಯಾಂಗರ್ ತಮ್ಮ ಬೋಲ್ಡ್​ ಉಡುಗೆ ವಿಚಾರವಾಗಿ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಮಯಾಂತಿ, ತೀಕ್ಷ್ಣ ಮಾತುಗಳಿಂದಲೇ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ನ.15ರಂದು ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧ ನಡೆದ ಮೊದಲ ಸೆಮಿಫೈನಲ್​ ಪಂದ್ಯದ ಕವರೇಜ್​ ವೇಳೆ ಮಯಾಂತಿ ಅವರು ಸ್ಕರ್ಟ್​ ಜೊತೆಗೆ ಬ್ಲೇಜರ್​ ಧರಿಸಿ, ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಪಂದ್ಯದ ವಿಶ್ಲೇಷಣೆ ಮಾಡುತ್ತಿದ್ದ ಸುನೀಲ್​ ಗವಾಸ್ಕರ್ ಪಕ್ಕದಲ್ಲೇ​ ಮಯಾಂತಿ ನಿಂತಿದ್ದರು. ಇದರ ಸ್ಕ್ರೀನ್​ ಶಾಟ್​ ತೆಗೆದುಕೊಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಇಷ್ಟೊಂದು ಚಿಕ್ಕ ಉಡುಗೆ ತೊಟ್ಟಿರುವುದಕ್ಕೆ ಆರ್ಥಿಕ ಸಮಸ್ಯೆ ಕಾರಣ ಇರಬಹುದು ಎನ್ನುವ ಅರ್ಥದಲ್ಲಿ ಟ್ರೋಲ್​ ಮಾಡಿದ್ದರು. ಇದೀಗ ಮಯಾಂತಿ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಬಜೆಟ್​ ಕಾಳಜಿಯ ಬಗ್ಗೆ ನನಗೆ ತಿಳಿಯಿತು. ಅಸಂಖ್ಯಾತ ಪೋಸ್ಟ್‌ಗಳಲ್ಲಿ ನನ್ನನ್ನು ಟ್ಯಾಗ್ ಮಾಡಿದ್ದು, ನನ್ನ ಕುಟುಂಬ ಮತ್ತು ಸ್ನೇಹಿತರು ಟ್ರೋಲ್ ಫೋಟೋಗಳಲ್ಲಿ ಮುಳುಗಿದ್ದಾರೆ. ಕೆಲವರು ನನ್ನ ಬ್ಲೇಜರ್ ಡ್ರೆಸ್‌ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಬಯಸಿದ್ದಾರೆ. ನೀವ್ಯಾರು ಚಿಂತೆ ಮಾಡಬೇಡಿ, ಫೈನಲ್‌ಗೆ ಸಂಪೂರ್ಣ ಸೂಟ್ ಅನ್ನು ನನ್ನದೇ ಹಣದಲ್ಲಿ ಖರೀದಿಸುತ್ತೇನೆ ಮತ್ತು ಧರಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟ್​ ಕಡೆ ಹೊರಳುವ ಮುನ್ನ ಮಯಾಂತಿ ಅವರು ಫುಟ್​ಬಾಲ್​ ಶೋಗಳನ್ನು ಹೋಸ್ಟ್​ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಕ್ರಿಕೆಟ್​ನಲ್ಲಿ ತಮ್ಮ ಆಳವಾದ ವಿಶ್ಲೇಷಣೆ ಮತ್ತು ಪ್ರಸ್ತುತ ಪಡಿಸುವ ಶೈಲಿಯೊಂದಿಗೆ ತಮ್ಮ ಗಮನ ಸೆಳೆದಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಯಾಂತಿ ಅವರು ತುಂಬಾ ಪರಿಚಿತ ಮುಖವಾಗಿದ್ದಾರೆ. ಕಾಮೆಂಟರಿ, ಪಂದ್ಯ ಪೂರ್ವ ಮತ್ತು ನಂತರದ ವಿಶ್ಲೇಷಣೆ, ಆಟಗಾರರು ಮತ್ತು ತಜ್ಞರೊಂದಿಗಿನ ಸಂದರ್ಶನಗಳ ಮಾಡುವ ಮೂಲಕ ಮೈದಾನದಲ್ಲಿ ಆಟಗಾರರಷ್ಟೇ ತುಂಬಾ ಗಮನ ಸೆಳೆದಿದ್ದಾರೆ.

ಅಂದಹಾಗೆ ಮಯಾಂತಿ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಪತ್ನಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರ ಸೊಸೆ. ಮಯಾಂತಿ ಅವರು 2020ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯ್ತನದಿಂದಾಗಿ ಮಯಾಂತಿ 2020-2021ರ ಕ್ರಿಕೆಟ್ ಋತುವಿನಿಂದ ಬಿಡುವು ಪಡೆದಿದ್ದರು. ಐಪಿಎಲ್ 15ನೇ ಆವೃತ್ತಿಯ ಮೂಲಕ ಅವರು ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ಕ್ರಿಕೆಟ್ ಕಾರ್ಯಕ್ರಮದ ನಿರೂಪಣೆಗೆ ಮರಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net