ಸಂಪಾದಕೀಯ: ಸ್ವಚ್ಛತೆ ಜೀವನಧರ್ಮದ ಒಂದು ಭಾಗವಾಗಲಿ

Edit 2
Published on

ಸ್ವಚ್ಛತೆ ನಾಗರಿಕ ಬದುಕಿನ ಮೌಲ್ಯಗಳಲ್ಲಿ ತುಂಬ ಮುಖ್ಯವಾದದ್ದು. ಅಭಿವೃದ್ಧಿಗೂ ಗರಿ ಮೂಡಿಸುವ ಸ್ವಚ್ಛತೆ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿಯೂ ಅಷ್ಟೇ ಅವಶ್ಯಕ. 135 ಕೋಟಿ ಜನಸಂಖ್ಯೆಯ ದೊಡ್ಡ ದೇಶವಾಗಿರುವ ಭಾರತದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಜೀವನಧರ್ಮದ ಭಾಗವಾಗಿ ಸ್ವಚ್ಛತೆಯನ್ನು ಅಳವಡಿಸಿಕೊಳ್ಳದಿದ್ದರೆ ಅದರಿಂದ ಎಲ್ಲರಿಗೂ ಸಮಸ್ಯೆ. ಅದೇಕೋ ಹಿಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ತೋರಬೇಕಾದ ಕಾಳಜಿ ತೋರಲಿಲ್ಲ. ಜನರು ಕೂಡ ಅವರ ಬದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಸ್ವಚ್ಛತೆ ಜನಾಂದೋಲನವಾಗಿ ಹೊಮ್ಮಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ 2014ರಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಆರಂಭಿಸಿದ್ದು, ಆ ಬಳಿಕ ಕೆಲ ಸಕಾರಾತ್ಮಕ ಬದಲಾವಣೆಗಳು ಕಂಡುಬಂದಿವೆ,

ಶೌಚಗೃಹ ನಿರ್ವಣ, ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ-ಈ ಎಲ್ಲ ಅಂಶಗಳನ್ನು ಮಹಾನಗರಗಳು ಮತ್ತು ಪಟ್ಟಣಗಳು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂಬ ಆಶಯದಿಂದ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಪ್ರತಿ ವರ್ಷ ರಾಷ್ಟ್ರಮಟ್ಟದಲ್ಲಿ ಸ್ವಚ್ಛತೆ ಸಮೀಕ್ಷೆ (ಸ್ವಚ್ಛ ಸರ್ವೆಕ್ಷಣ್) ನಡೆಸುತ್ತಿದ್ದು, 2020ರ ಫಲಿತಾಂಶವನ್ನು ಗುರುವಾರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದರು. ಮಧ್ಯಪ್ರದೇಶದ ಇಂದೋರ್ ಸತತ ನಾಲ್ಕನೇ ವರ್ಷ ‘ದೇಶದ ಅತ್ಯಂತ ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತಿನ ಸೂರತ್ ಮತ್ತು ಮಹಾರಾಷ್ಟ್ರದ ನವಿ ಮುಂಬೈ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ. ಇಂದೋರ್​ನ ಈ ಸಾಧನೆಯನ್ನು ಅವಲೋಕಿಸುವುದಾದರೆ, ಅಲ್ಲಿ ಸರ್ಕಾರದ ಕ್ರಮಗಳು, ಸ್ಥಳೀಯ ಆಡಳಿತಗಳ ಶ್ರಮದ ಜತೆಗೆ ಜನರ ಸಕ್ರಿಯ ಸಹಭಾಗಿತ್ವ ಮತ್ತು ಕೊಡುಗೆಯನ್ನು ಒಳಗೊಂಡಿರುವುದು ಸ್ಪಷ್ಟಗೋಚರ. ಹಿಂದೊಮ್ಮೆ ಅನೈರ್ಮಲ್ಯದ ಕುಖ್ಯಾತಿಗೆ ಗುರಿಯಾಗಿದ್ದ ವಾರಾಣಸಿ ಪ್ರಸಕ್ತ, ‘ಅತ್ಯುತ್ತಮ ಗಂಗಾ ಪಟ್ಟಣ’ ಎಂಬ ಹಿರಿಮೆಗೆ ಪಾತ್ರವಾಗಿದ್ದು, ಪರಿವರ್ತನೆಯ ಬದ್ಧತೆಗೆ ದ್ಯೋತಕ. ಇದನ್ನೂ ಓದಿ: ಆರ್​ಸಿಬಿ ತಂಡಕ್ಕೆ ದುಬೈ ಹೋಟೆಲ್​ನಲ್ಲಿ 155 ಕೋಣೆಗಳು ಬುಕ್​, ಆರೋಗ್ಯ-ಸುರಕ್ಷತೆಗೆ ಅಗ್ರ ಆದ್ಯತೆ

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, 3ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ, ಸಮಗ್ರ ವಿಭಾಗದಲ್ಲಿ ಐದನೇ ಸ್ಥಾನ ಲಭಿಸಿದ್ದು, ಕಳೆದ ವರ್ಷ ಮೂರನೇ ಸ್ಥಾನದಲ್ಲಿತ್ತು. ಇನ್ನು, ಮಾಹಿತಿ-ತಂತ್ರಜ್ಞಾನ ನಗರಿ, ಜೈವಿಕ ತಂತ್ರಜ್ಞಾನ ನಗರಿ ಎಂಬೆಲ್ಲ ಹಿರಿಮೆ ಪಡೆದುಕೊಂಡಿರುವ ಬೆಂಗಳೂರು ಮಾತ್ರ ಸ್ವಚ್ಛತೆ ವಿಷಯದಲ್ಲಿ ಸಂಪೂರ್ಣವಾಗಿ ಎಡವಿರುವುದು, ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದೇ ಹೇಳಬೇಕು. ಈ ವೈಫಲ್ಯಕ್ಕೆ ಯಾರೆಲ್ಲ ಹೊಣೆಗಾರರು ಎಂಬುದರ ಅವಲೋಕನ ನಡೆಸಿ, ಆ ಪ್ರಮಾದಗಳನ್ನು ಸರಿಪಡಿಸಿಕೊಳ್ಳಬೇಕು. ಸ್ವಚ್ಛತೆಯ ಸಮೀಕ್ಷೆಯಲ್ಲಿ ಕಳೆದ ಬಾರಿ 194ನೇ ರ‍್ಯಾಂಕಿಂಗ್ ಪಡೆದಿದ್ದ ಬೆಂಗಳೂರು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಬದಲು ಮತ್ತಷ್ಟು ನಿರಾಸೆ ಮೂಡಿಸಿದ್ದು, 214ನೇ ಸ್ಥಾನಕ್ಕೆ ಕುಸಿದಿದೆ. ಕರೊನಾ ಕಾಲಘಟ್ಟದಲ್ಲಿ ಸ್ವಚ್ಛತೆಯ ಅಗತ್ಯ ಮತ್ತು ಮಹತ್ವ ಮತ್ತಷ್ಟು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಹೀಗಿರುವಾಗಲೂ, ರಾಜ್ಯದ ರಾಜಧಾನಿಯ ಸ್ಥಿತಿ ಹೀಗೇಕೆ? ಸರ್ಕಾರ, ಬಿಬಿಎಂಪಿ, ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳು ಉತ್ತರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net