ಯುವಸಮುದಾಯ ಕೃಷಿಯತ್ತ ಮರಳುತ್ತಿರುವುದು ಸ್ವಾಗತಾರ್ಹ

Edit 1
Published on

ಪಶುಸಂಗೋಪನೆ ಗ್ರಾಮೀಣ ಭಾರತದ ಅವಿಭಾಜ್ಯ ಅಂಗವಾಗಿಯೇ ಬೆಳೆದು ಬಂದಿದೆ. ಭೌತಿಕ ಸಂಪತ್ತಿನ ಬದಲು ಪಶುಸಂಪತ್ತನ್ನೇ ನಿಜವಾದ ಸಮೃದ್ಧಿ ಎಂದು ಬಲವಾಗಿ ನಂಬಿದ್ದ ಕಾಲವೂ ಇತ್ತು. ಕಾಲಚಕ್ರ ತಿರುಗಲೇ ಬೇಕು. ಹಲವು ಆಕರ್ಷಣೆಯ ಪ್ರಭಾವ ಮತ್ತು ಆಸಕ್ತಿಯ ಕೊರತೆಯಿಂದ ಸ್ವಲ್ಪ ಮಂಕಾಗಿದ್ದ ಪಶುಸಂಗೋಪನೆ ವ್ಯವಸ್ಥೆ ಈಗ ಮತ್ತೆ ಬಲ ಪಡೆದುಕೊಳ್ಳುತ್ತಿದೆ. ಕೃಷಿಯ ಜತೆಜತೆಗೆ ಜಾನುವಾರುಗಳ ಸಾಕಾಣಿಕೆ ಸಮತೋಲಿತ, ಸುಸ್ಥಿರ ಆದಾಯ ತಂದುಕೊಡಬಲ್ಲದು ಎಂಬ ಅರಿವು ನಿಧಾನವಾಗಿ ವಿಸ್ತರಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲೂ ಯುವಕರು ಹೈನುಗಾರಿಕೆ, ಗೋಉತ್ಪನ್ನ ಮಾರಾಟ ಸೇರಿ ಹಲವು ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಹೊಸ ಸಾಧ್ಯತೆಗಳು ಮತ್ತು ಆರ್ಥಿಕವಾಗಿ ಕೈಹಿಡಿಯುವ ಶಕ್ತಿಯೇ ಅಸಾಧಾರಣವಾದದ್ದು ಎಂಬ ಸಂಗತಿ ಮನದಟ್ಟಾಗುತ್ತಿದೆ. ಕರೊನಾ ನೀಡಿದ ತೀವ್ರ ಆರ್ಥಿಕ ಹೊಡೆತದ ನಂತರವಂತೂ, ಯುವಸಮುದಾಯ ಇಂಥ ಹೊಸಸಾಧ್ಯತೆಗಳನ್ನು ಬೆನ್ನಟ್ಟಿ ಗ್ರಾಮಗಳತ್ತ, ಕೃಷಿಯತ್ತ ಮರಳುತ್ತಿದೆ. ಕೃಷಿಯ ಜತೆಗೆ ಪಶುಸಂಗೋಪನೆಯತ್ತ ಒಲವು ತೋರುತ್ತಿದೆ ಎಂಬುದು ಸಮಾಧಾನಕರ ಬೆಳವಣಿಗೆ. ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಆಸೀಸ್ ಆಲ್ರೌಂಡರ್ ಕ್ಯಾಮರೊನ್ ವೈಟ್

ಪಶುಗಳಿಗೆ ರೋಗ ಆವರಿಸಿಕೊಂಡಾಗ ಇಲ್ಲವೆ ತುರ್ತು ಪರಿಸ್ಥಿತಿ ಇದ್ದಾಗ ರೈತರು ಧೃತಿಗೆಡುವುದು, ಚಿಕಿತ್ಸೆಗಾಗಿ ಪರದಾಡುವುದು-ಇಂದಿಗೂ ಬಹುತೇಕ ಹಳ್ಳಿಗಳಲ್ಲಿ ಇರುವ ಸಮಸ್ಯೆ. ಸಕಾಲಕ್ಕೆ ಚಿಕಿತ್ಸೆ ದೊರೆಯದ ಪರಿಣಾಮ ಪಶುಗಳ ಜೀವಹಾನಿಯೂ ಹೆಚ್ಚುತ್ತಿದ್ದು, ಇದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪಶು ವೈದ್ಯಕೀಯ ಇಲಾಖೆಯ ಪುನರ್ ರಚನೆ ಪ್ರಕಟಿಸಿದ ಬೆನ್ನಲ್ಲೇ ‘ಪಶು ಸಂಜೀವಿನಿ’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದಾರೆ. ತುರ್ತು ಕರೆಗೆ ಸ್ಪಂದಿಸಿ ಜಾನುವಾರುಗಳ ಆರೋಗ್ಯ ರಕ್ಷಣೆ ಸೇವೆಗಳನ್ನು ರೈತರ ಮನೆಬಾಗಿಲಿಗೆ ಒದಗಿಸುವ ಸೇವೆ ಇದಾಗಿದೆ. ‘ರಾಜ್ಯದಲ್ಲಿ ಮೊಟ್ಟಮೊದಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಜಾನುವಾರಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲು ಅನುವಾಗಲಿದೆ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

‘ಪಶು ಸಂಜೀವಿನಿ’ ಸುಸಜ್ಜಿತ ಶಸ್ತ್ರಚಿಕಿತ್ಸಾ ವಾಹನಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. 200 ಕೆ.ಜಿ. ತೂಕದ ಸಾಮರ್ಥ್ಯದ ಶಸ್ತ್ರಚಿಕಿತ್ಸಾ ಟೇಬಲ್, ಶಸ್ತ್ರಚಿಕಿತ್ಸೆ, ಪ್ರಸೂತಿ ಕಿಟ್, ಪಶು ವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸೇರಿ ಹಲವು ಸೌಲಭ್ಯ ಹೊಂದಿವೆ. ಮೊದಲ ಹಂತದಲ್ಲಿ, ರಾಯಚೂರು, ಕಲಬುರಗಿ, ಧಾರವಾಡ, ವಿಜಯಪುರ, ಬೆಳಗಾವಿ, ಮಂಗಳೂರು, ಮಂಡ್ಯ ಸೇರಿ 15 ಜಿಲ್ಲೆಗಳಲ್ಲಿ ಈ ಆಂಬುಲೆನ್ಸ್ ಕಾರ್ಯನಿರ್ವಹಿಸಲಿವೆ. ಇಲಾಖೆಯ ಸಹಾಯವಾಣಿ 1962ಕ್ಕೆ ‘ಪಶು ಸಂಜೀವಿನಿ’ ಸೇವೆಗಳನ್ನು ಜೋಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಣೆ ಆಗಲಿದೆ. ಈ ಮೂಲಕ ರೈತರ ದೊಡ್ಡ ಸಮಸ್ಯೆಗೆ ಸ್ಪಂದನೆ ಸಿಗಲಿದೆ. ಆದರೆ, ಕಾಟಾಚಾರಕ್ಕೆ ಇದು ಸೀಮಿತವಾಗದೆ ರೈತರ ಮನೆಬಾಗಿಲಿಗೆ ತಲುಪಿ ಜಾನುವಾರಗಳ ರಕ್ಷಣೆ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net