

ಸೈಬರ್ ಅಪರಾಧಗಳಲ್ಲಿ ತೊಡಗಿದ್ದ ಸುಳಿವಿನ ಮೇರೆಗೆ, ಇಂಥ ಅಕ್ರಮ ಜಾಲದ ವಿರುದ್ಧ ಕೇಂದ್ರ ತನಿಖಾ ದಳವು (ಸಿಬಿಐ) ಆಯಾ ರಾಜ್ಯಗಳ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ಸುಮಾರು 26 ಜನರನ್ನು ಬಂಧಿಸಿದೆ. ಕರ್ನಾಟಕ, ದೆಹಲಿ, ಪಂಜಾಬ್, ಅಸ್ಸಾಂ, ಹರಿಯಾಣ ಮುಂತಾದ ರಾಜ್ಯಗಳಲ್ಲಿನ ನೂರಾರು ಸ್ಥಳಗಳಲ್ಲಿ ‘ಆಪರೇಷನ್ ಚಕ್ರ’ ಹೆಸರಿನ ಈ ಕಾರ್ಯಾಚರಣೆ ನಡೆದಿದ್ದು, ಈವರೆಗೆ ಕೋಟ್ಯಂತರ ರೂಪಾಯಿ ನಗದು ಹಾಗೂ ಕಿಲೋಗೆಟ್ಟಲೆ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ, ಅನೇಕ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಜಾಲ ಬೇರೆ ಬೇರೆ ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿರುವ ಸಂಶಯವಿರುವುದರಿಂದ ಇಂಟರ್ಪೋಲ್, ಎಫ್ಬಿಐ, ರಾಯಲ್ ಕೆನಡಿಯನ್ ಮೌಂಟನ್ ಪೊಲೀಸ್ ಮತ್ತು ಆಸ್ಟ್ರೇಲಿಯಾ ಪೊಲೀಸ್ ಮುಂತಾದ ಸಂಸ್ಥೆಗಳ ಸಹಯೋಗವನ್ನೂ ಸಿಬಿಐ ಪಡೆದುಕೊಂಡಿದೆ. ಇದರಿಂದಾಗಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಅನುಕೂಲವಾಗುತ್ತದೆಯಲ್ಲದೆ, ಬೇರೆ ಬೇರೆ ದೇಶಗಳಲ್ಲಿರುವ ಅಪರಾಧಿಗಳನ್ನು ಬಲೆಗೆ ಕೆಡವಲೂ ಸಹಾಯವಾಗುತ್ತದೆ.
ಸಿಬಿಐನಂತಹ ಕೇಂದ್ರೀಯ ಸಂಸ್ಥೆ ಸಂಘಟಿತ ಕಾರ್ಯಾಚರಣೆ ನಡೆಸಿರುವುದು ಈ ಜಾಲವನ್ನು ತಕ್ಕಮಟ್ಟಿಗಾದರೂ ನಿಯಂತ್ರಿಸುವಲ್ಲಿ ನೆರವಾಗಬಹುದೆಂದು ಆಶಿಸಬಹುದಾಗಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಿಂದಾಗಿ ಈಚಿನ ವರ್ಷಗಳಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಿರುವುದು ಗೊತ್ತಿರುವಂಥದೇ. ಈಗಂತೂ ಮೊಬೈಲ್ ಫೋನಿನಲ್ಲೇ ಹಣಕಾಸು ಸೇರಿ ವಿವಿಧ ವ್ಯವಹಾರಗಳನ್ನು ನಡೆಸಬಹುದಾದ್ದರಿಂದ, ಹೆಚ್ಚೆಚ್ಚು ಜನರು ಡಿಜಿಟಲ್ನತ್ತ ಹೊರಳುತ್ತಿದ್ದಾರೆ. ಇದರಿಂದ ವ್ಯವಹಾರ ನಡೆಸುವುದು ಸರಳ ಮತ್ತು ಸುಲಭ ಎಂಬುದು ಒಂದೆಡೆಯಾದರೆ, ಪಾರದರ್ಶಕತೆಗೂ ಇಂಬು ನೀಡುತ್ತದೆ. ಇದೇ ಸಂದರ್ಭದಲ್ಲಿ, ಸೈಬರ್ ಚೋರರು ಸಹ ಹೆಚ್ಚಿರುವುದು ಕಳವಳಕಾರಿ ಸಂಗತಿ.
ಬ್ಯಾಂಕ್ ಖಾತೆಗೆ ಕನ್ನಹಾಕುವುದು, ಮೋಸದ ಇಮೇಲ್ ಕಳಿಸುವುದು- ಹೀಗೆ ಸೈಬರ್ ಮೋಸದ ಪರಿ ನಾನಾ ವಿಧ. ಇದು ಅಂತರ್ಜಾಲ ವೇದಿಕೆಯಾದ್ದರಿಂದ ಯಾವುದೋ ಅಜ್ಞಾತ ಸ್ಥಳದಲ್ಲಿ ಅಷ್ಟೇಕೆ ಹೊರದೇಶದಲ್ಲೆಲ್ಲೋ ಕುಳಿತು ಸೈಬರ್ ಕಳ್ಳರು ಕರಾಮತ್ತು ತೋರಿಸಬಹುದು. ಇಲ್ಲಿ ವಂಚನೆಗೀಡಾಗುವವ ಹಾಗೂ ವಂಚಕ ಮುಖಾಮುಖಿ ಆಗಬೇಕು ಎಂದಿಲ್ಲ. ಹೀಗಾಗಿಯೇ ದಿನದಿನಕ್ಕೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.
ಸರ್ಕಾರಗಳು ಸೈಬರ್ ವಂಚನೆ ನಿಯಂತ್ರಣಕ್ಕೆಂದು ಪ್ರತ್ಯೇಕ ಠಾಣೆ ಇತ್ಯಾದಿ ವ್ಯವಸ್ಥೆ ಮಾಡಿವೆಯಾದರೂ, ಸಮಸ್ಯೆಯ ಗಾತ್ರಕ್ಕೂ ಪರಿಹಾರ ವ್ಯವಸ್ಥೆಗೂ ಅಜಗಜಾಂತರವಿದೆ (ಸೈಬರ್ ವಂಚನೆಗೀಡಾಗಿ ಹಣ ಕಳೆದುಕೊಂಡವರು 112 ಫೋನ್ ನಂಬರಿಗೆ ಕರೆಮಾಡಿ ಮಾಹಿತಿ ನೀಡುವ ಸವಲತ್ತನ್ನು ಪೊಲೀಸ್ ಇಲಾಖೆ ಕಲ್ಪಿಸಿದೆ). ಹೀಗಾಗಿ ಜನರು ಹೆಚ್ಚೆಚ್ಚು ಸೈಬರ್ ಜಾಗೃತರಾಗುವುದು ಕೂಡ ಸದ್ಯದ ಅನಿವಾರ್ಯ. ಯಾವುದೇ ಆನ್ಲೈನ್ ಅಥವಾ ಡಿಜಿಟಲ್ ವ್ಯವಹಾರ ನಡೆಸುವ ಮುನ್ನ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಗೆ ಪ್ರತಿಕ್ರಿಯಿಸುವ ಮೊದಲು ಸಾರಾಸಾರ ವಿಚಾರ ಮಾಡುವುದು ಸೂಕ್ತ. ಅದರಲ್ಲೂ ಈಗ ಮಕ್ಕಳು ಹಾಗೂ ಯುವಜನರು ಆನ್ಲೈನ್ನಲ್ಲಿ ಹೆಚ್ಚು ಹೊತ್ತು ಸಕ್ರಿಯರಾಗಿರುವುದರಿಂದಾಗಿ ಇನ್ನಷ್ಟು ಎಚ್ಚರ ಅಗತ್ಯ.