

Vidyasiri Scheme : ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಮುಖ್ಯವಾಹಿನಿಗೆ ಬರುವ ಪ್ರಯತ್ನ ನಿಮ್ಮಿಂದ ಹೆಚ್ಚೆಚ್ಚು ಆಗಬೇಕು. ಈ ಕಾರಣಕ್ಕೇ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಮಡಿವಾಳ ಮತ್ತು ಹಿಂದುಳಿದ ಸಮುದಾಯದ ಮಕ್ಕಳು ಶಿಕ್ಷಣವಂತರಾಗಬೇಕು. ಇದಕ್ಕೇ ವಿದ್ಯಾಸಿರಿ ಮೊತ್ತವನ್ನು ಪ್ರತೀ ವಿದ್ಯಾರ್ಥಿಗೆ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು.
12ನೇ ಶತಮಾನದಲ್ಲೇ ಮಡಿವಾಳ ಮಾಚಿ ದೇವರು ಬಸವಣ್ಣನವರ ಜತೆ ಸೇರಿ ಸಮಾಜದ ಬದಲಾವಣೆಗೆ ಮುಂದಾಗಿದ್ದರು. ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನತೆ ಇದೆ. ಈ ಕಾರಣಕ್ಕೆ ಉದ್ಯೋಗ, ಶಿಕ್ಷಣ ಸಿಗದೆ ಆರ್ಥಿಕ ಅಸಮಾನತೆ ಹೆಚ್ಚಿ ಅಸಮಾನತೆ ಹೆಚ್ಚಾಯಿತು ಎಂದು ವಿವರಿಸಿದರು.
ಮಡಿವಾಳ ಸಮಾಜದಲ್ಲಿ ಯಾರೂ ಶಾಸಕರಿಲ್ಲ, ಒಬ್ಬರು ಮಾತ್ರ IAS ಅಧಿಕಾರಿ ಇದ್ದಾರೆ. ಮಡಿವಾಳ ಸಮಾಜ ಇಷ್ಟು ಹಿಂದುಳಿಯಲು ಮನುಸ್ಮೃತಿ ಕಾರಣ. ಈ ಅಸಮಾನತೆ ಕಾರಣಕ್ಕೇ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಬೆಂಕಿ ಹಾಕಿ ಸುಟ್ಟರು. ಈ ಮನುಸ್ಮೃತಿಯೇ ಜಾತಿ ವ್ಯವಸ್ಥೆಯ ಮೂಲ ಎಂದರು.