ನನ್ನ ಗಂಡನಿಂದ... ಮಗಳ ಭಾವಿ ಪತಿಯ ಜತೆ ಎಸ್ಕೇಪ್​ ಆಗಿದ್ದಕ್ಕೆ ಭಾವಿ ಅತ್ತೆ ಕೊಟ್ಟ ಅಚ್ಚರಿ ಕಾರಣ ಹೀಗಿದೆ...! Bride Mother Elope

Bride Mother Elope
Published on

Bride Mother Elope : ಉತ್ತರ ಪ್ರದೇಶದ ಅಲಿಗಢದಲ್ಲಿ ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ತನ್ನ ಮಗಳ ಭಾವಿ ಪತಿ ಅಂದ್ರೆ ತನ್ನ ಭಾವಿ ಅಳಿಯನ ಜೊತೆ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಓಡಿಹೋಗಿದ್ದರು. ಇದೀಗ ಆಕೆಯ ಕೊಟ್ಟಿರುವ ಕಾರಣ ಎಲ್ಲರನ್ನು ಹುಬ್ಬೇರಿಸಿದೆ.

ವಧುವಿನ ತಾಯಿ ಸಪ್ನಾ ಮತ್ತು ಆಕೆಯ ಮಗಳ ಭಾವಿ ಪತಿ ರಾಹುಲ್, ಮದುವೆಗೆ ಒಂಬತ್ತು ದಿನಗಳ ಬಾಕಿ ಇರುವಾಗಲೇ ಎಸ್ಕೇಪ್​ ಆಗಿದ್ದರು. ಈ ಘಟನೆ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ, ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಇಬ್ಬರು ಓಡಿಹೋದ ನಂತರ, ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಸಪ್ನಾ ಮತ್ತು ರಾಹುಲ್, ವಧುವಿನ ಆಭರಣಗಳು ಮತ್ತು ಮದುವೆಗಾಗಿ ಉಳಿತಾಯ ಮಾಡಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸಿದ ಪೊಲೀಸರು, ಸ್ವಪ್ನಾ ಮತ್ತು ರಾಹುಲ್​ ಇಬ್ಬರನ್ನು ಪತ್ತೆ ಮಾಡಿ, ತಮ್ಮ ವಶಕ್ಕೆ ಪಡೆದುಕೊಂಡರು.

ರಾಹುಲ್​ ಜೊತೆ ಓಡಿ ಹೋಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸ್ವಪ್ನಾ, ತನ್ನ ಕುಡುಕ ಗಂಡನ ಕಿರುಕುಳದಿಂದಾಗಿ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದೇನೆ ಎಂದು ಸಪ್ನಾ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೆ, ತನ್ನ ಮಗಳು ಆಗಾಗ ತನ್ನೊಂದಿಗೆ ಜಗಳವಾಡುತ್ತಿದ್ದಳು ಅಂತಾನೂ ಸಪ್ನಾ ಹೇಳಿದ್ದಾರೆ.

ಪ್ರಕರಣ ದಾಖಲಾಗಿದ್ದರಿಂದ ನಾನು ಮನೆಗೆ ವಾಪಸ್​ ಬಂದೆ. ಅದೇನೆ ಆಗಲಿ ನಾನು ಮಾತ್ರ ಗೆಳೆಯ ರಾಹುಲ್ ಜೊತೆಯಲ್ಲೇ ವಾಸಿಸುತ್ತೇನೆ ಎಂದು ಸಪ್ನಾ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ನಾನು ಮನೆಯಿಂದ ಹೋಗುವಾಗ ಮಗಳ ಆಭರಣ ಅಥವಾ ಹಣ ತೆಗೆದುಕೊಂಡು ಹೋಗಲಿಲ್ಲ. ಸುಳ್ಳು ಆರೋಪ ಮಾಡಲಾಗಿದೆ. ನನ್ನ ಬಳಿ ಕೇವಲ 200 ರೂಪಾಯಿ ಮತ್ತು ಒಂದು ಮೊಬೈಲ್ ಫೋನ್ ಮಾತ್ರ ಇತ್ತು ಎಂದು ಸಪ್ನಾ ಹೇಳಿದ್ದಾರೆ.

ಸಪ್ನಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ನಾನು ಆಕೆಯೊಂದಿಗೆ ಹೋದೆ ಎಂದು ರಾಹುಲ್ ಪ್ರತಿಕ್ರಿಯೆ ನೀಡಿದ್ದಾನೆ. ಮೊದಲು ಲಖನೌಗೆ ಹೋಗಿ ಅಲ್ಲಿಂದ ಮುಜಾಫರ್​ಪುರ್​ಗೆ ಹೋದೆವು. ನಮ್ಮ ವಿರುದ್ಧ ಪೊಲೀಸ್​ ಪ್ರಕರಣ ದಾಖಲಾಗಿದೆ ಎಂದು ಗೊತ್ತಾದಾಗ ಇಬ್ಬರು ವಾಪಸ್​ ಬಂದೆವು ಎಂದು ಯುವಕ ಹೇಳಿದ್ದಾನೆ. ಸಪ್ನಾಳನ್ನು ಮದುವೆಯಾಗುವುದಾಗಿಯೂ ಆತ ಹೇಳಿದ್ದಾನೆ.

ಅಂದಹಾಗೆ, ಈ ತಿಂಗಳ 16ರಂದು ಸಪ್ನಾಳ ಮಗಳ ಜತೆ ರಾಹುಲ್​ ವಿವಾಹ ನಡೆಯಬೇಕಿತ್ತು. ಮದುವೆಗೆ ಎಲ್ಲ ತಯಾರಿ ಮಾಡಿಕೊಂಡು, ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ಅವರಿಬ್ಬರು ಮನೆಗೆ ವಾಪಸ್​ ಬರಲೇ ಇಲ್ಲ. ಅವರ ಬಗ್ಗೆ ಯಾವುದೇ ಸುದ್ದಿಯೂ ಸಿಗಲಿಲ್ಲ. ಇಬ್ಬರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅದು ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ಪ್ರಕರಣ ದಾಖಲಿಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net