

ಮುಂಬೈ: ಮಹಾರಾಷ್ಟ್ರದ ಭಿವಾಂಡಿ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮೊಣಕಾಲು ಉದ್ದದ ಸುಮಾರು 1 ಕೆ.ಜಿ ತೂಕದ ಮಂಗಳಸೂತ್ರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಿರುವ ಮುಂಬೈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಗೊರೆ ನೀಡಿದ ವ್ಯಕ್ತಿಯ ಹೆಸರು ಬಾಲಾ. ವೈರಲ್ ವಿಡಿಯೋ ಪೊಲೀಸರ ಗಮನ ಸೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಾಲಾ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಪತ್ನಿಗೆ ನೀಡಿರುವ ಆಭರಣ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಬಾಲಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆಭರಣ ಸಂಪೂರ್ಣ ಚಿನ್ನವಲ್ಲ. ಅದು ಚಿನ್ನದ ಪ್ಲೇಟ್ ಉಳ್ಳ ಮಂಗಳಸೂತ್ರ ಎಂದು ಬಾಲಾ ಬಾಯ್ಬಿಟ್ಟಿದ್ದಾರೆ.
ಇದು ಕೇವಲ ಅನುಕರಣೆಯಷ್ಟೇ, ಜ್ಯುವೆಲ್ಲರಿ ಶಾಪ್ನಿಂದ ಕೇವಲ 38,000 ರೂಪಾಯಿಗೆ ಕೊಂಡು ತಂದೆ ಎಂದು ಬಾಲಾ ಹೇಳಿಕೆ ನೀಡಿ, ಆಧಾರಗಳನ್ನು ತೋರಿದ ಬಳಿಕ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋ ವೈರಲ್ ಆಗುತ್ತಿದ್ದಂತೆ ಅದು ನಮ್ಮ ಗಮನಕ್ಕೆ ಬಂದಿತು. ಹೆಚ್ಚು ಚಿನ್ನಾಭರಣವನ್ನು ಹೊಂದುವುದು ಮತ್ತು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಬಾಲಾರನ್ನು ಠಾಣೆಗೆ ಕರೆಸಲಾಯಿತು. ಚಿನ್ನದ ಮಂಗಳಸೂತ್ರ ನಕಲಿ ಎಂದು ಬಾಲಾ ಒಪ್ಪಿಕೊಂಡರು. ಜ್ಯುವೆಲ್ಲರಿ ಶಾಪ್ನಲ್ಲಿ 38 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ಹೇಳಿದರು. ಬಳಿಕ ಅವರನ್ನು ಶಾಪ್ಗೆ ಕರೆದೊಯ್ದು ಪರಿಶೀಲಿಸಲಾಯಿತು. ಅದು ನಕಲಿ ಎಂಬುದು ತಿಳಿದುಬಂದಿತು ಎಂದಿದ್ದಾರೆ.
ಕೊನೆಯಲ್ಲಿ ಸಲಹೆಯೊಂದನ್ನು ನೀಡಿದ ಪೊಲೀಸ್ ಅಧಿಕಾರಿ ಚಿನ್ನದ ಆಭರಣಗಳನ್ನು ಈ ರೀತಿ ಪ್ರದರ್ಶಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ರೀತಿ ಮಾಡಿದರೆ ಕಿಡಿಗೇಡಿಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)