

ತಿರುವನಂತಪುರಂ: ಕೇರಳದ 15ನೇ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದೆ. ಹೊಸದಾಗಿ ಆಯ್ಕೆಯಾದ ಶಾಸಕರು ಹಂಗಾಮಿ ಸ್ಪೀಕರ್ ಸಮ್ಮುಖದಲ್ಲಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವೀಶೇಷವೆಂದರೆ ಕೇರಳದ ವಿಧಾನಸಭೆಯಲ್ಲಿ ಕೆಲ ಶಾಸಕರು ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವರು ದೇವರ ಹೆಸರಿನಲ್ಲಿ, ಇನ್ನು ಕೆಲವರು ಶ್ರದ್ಧಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅದರಲ್ಲೂ ಕಾಸರಗೋಡಿನ ಮಂಜೇಶ್ವರಂ ಶಾಸಕ ಎ.ಕೆ.ಎಮ್. ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷಾಭಿಮಾನವನ್ನು ಮೆರೆದರು.
ಮುವಾಟ್ಟುಪುಳ ಶಾಸಕ ಮ್ಯಾಥೀವ್ ಕುಜಲ್ನಾದನ್ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಪಡೆದರು.
ಮತ್ತೊಮ್ಮೆ ಕೇರಳದ ಗದ್ದುಗೆ ಏರಿರುವ ಪಿಣರಾಯಿ ವಿಜಯನ್ ನೇತೃತ್ವದ ಹೊಸ ಸರ್ಕಾರದಲ್ಲಿ 53 ಹೊಸ ಶಾಸಕರಿದ್ದಾರೆ. 10 ಮಹಿಳಾ ಶಾಸಕರಿರುವುದು ಇನ್ನೊಂದು ವಿಶೇಷವಾಗಿದೆ. (ಏಜೆನ್ಸೀಸ್)