ಭಯ ಹುಟ್ಟಿಸಿದ ಹ್ಯಾಪಿ ಹೈಪೋಕ್ಸಿಯಾ: ಆತಂಕ ಮೂಡಿಸುತ್ತಿದೆ ಹಠಾತ್ ಸಾವು

IMG-20210525-WA0001
Published on

ಪಂಕಜ ಕೆ.ಎಂ ಬೆಂಗಳೂರು

ಕೋವಿಡ್ ಸೋಂಕಿನಿಂದ ಗುಣಮುಖರಾದವರು ಹಠಾತ್ ಸಾವಿಗೀಡಾಗುತ್ತಿ ರುವುದು ಭಯ ಹುಟ್ಟಿಸಿದೆ. ಕೋವಿಡ್​ನಿಂದ ಸಾವಿನ ಒಟ್ಟು ಪ್ರಕರಣಗಳಲ್ಲಿ ಶೇ.20-25 ಸೋಂಕಿತರು ‘ಹ್ಯಾಪಿ ಹೈಪೋಕ್ಸಿಯಾ’ಗೆ (ಕೋವಿಡ್​ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಏಕಾಏಕಿ ಸಾವಿಗೀಡಾಗುವುದು) ಬಲಿಯಾಗಿದ್ದಾರೆ.

ಹ್ಯಾಪಿ ಹೈಪೋಕ್ಸಿಯಾದಿಂದ ಸೋಂಕಿತರು ಸಾಯಲು ಯಾವುದೇ ಭಯ, ಆತಂಕ ಅಥವಾ ಮಾನಸಿಕ ಕಾರಣಗಳಿಲ್ಲ. ಸೋಂಕಿನ ಆರಂಭಿಕ ಹಂತಗಳಲ್ಲಿ ರೋಗಿಯು ಉತ್ತಮವಾಗಿಯೇ ಸ್ಪಂದಿಸುತ್ತಾನೆ. ಚಿಕಿತ್ಸೆ ಪೂರ್ಣಗೊಂಡು ಗುಣಮುಖನಾದಂತೆ ಕಾಣಿಸುತ್ತಾನೆ. ಆದರೆ, ಆ ಸಮಯದಲ್ಲಿ ರಕ್ತದಲ್ಲಿನ ಆಮ್ಲಜನಕದ ಅಂಶವು ಹಠಾತ್ತಾಗಿ ಕ್ಷೀಣಿಸಿ ಉಸಿರಾಟದ ವ್ಯವಸ್ಥೆಯಲ್ಲಿ ಗಂಭೀರ ಪರಿಣಾಮ ಬೀರಿ ಇದ್ದಕ್ಕಿದ್ದಂತೆಯೇ ಮೃತಪಡುತ್ತಿದ್ದಾರೆ. ಆದ್ದರಿಂದ, ಸಣ್ಣ ಪ್ರಮಾಣದ ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತರೂ ಸಹ ಆಮ್ಲಜನಕ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು ಎಂದು ತಜ್ಞರು ಹೇಳಿದ್ದಾರೆ.

2ನೇ ವಾರ ಹೆಚ್ಚು ಅಪಾಯ: ಕೋವಿಡ್ ಸೋಂಕಿತರಲ್ಲಿ ಸೋಂಕಿಗೆ ಒಳಗಾದ ಎರಡನೇ ವಾರ ಅಂದರೆ 7-10ನೇ ದಿನ ಬಹಳ ಎಚ್ಚರಿಕೆ ವಹಿಸಬೇಕಿದೆ. ಸೋಂಕು ಆರಂಭದ ದಿನಗಳಲ್ಲಿ ದೇಹದಲ್ಲಿರುವ ಪ್ರತಿರೋಧಕ ಕಣಗಳು (ಆಂಟಿಬಾಡಿಸ್) ಕರೊನಾ ವೈರಸ್ ಜತೆಗೆ ಹೋರಾಟ ನಡೆಸುತ್ತವೆ. ಇದರಿಂದ 3-4 ದಿನಗಳಲ್ಲೇ ಜ್ವರ ವಾಸಿಯಾಗಿ ರೋಗಿ ಗುಣ ಹೊಂದುತ್ತಾನೆ. ಆದರೆ, ನಂತರದಲ್ಲಿ ಅಂದರೆ 7-10ನೇ ದಿನದಲ್ಲಿ ಮತ್ತೆ ಜ್ವರ ಕಾಣಿಸಿಕೊಳ್ಳುತ್ತದೆ. ಈ ವೇಳೆ ಪ್ರತಿರೋಧಕ ಕಣಗಳು ದೇಹದಲ್ಲಿ ತೀವ್ರವಾಗಿ ವರ್ತಿಸಲು ಆರಂಭಿಸುತ್ತವೆ. ಈ ವೇಳೆ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗುತ್ತದೆ. ರೋಗಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಈ ವೇಳೆ ಆಕ್ಸಿಜನ್, ಸ್ಟಿರಾಯಿಡ್ ಸೇರಿ ಪೂರಕ ಔಷಧಗಳನ್ನು ನೀಡಿ ಉಪಚರಿಸಬೇಕಾಗುತ್ತದೆ.

ಪತ್ತೆ ಹೇಗೆ?: ರೋಗಿಯ ರಕ್ತ ಪಡೆದು ಡಿ ಡೈಮರ್ ಪರೀಕ್ಷೆಗೆ ಒಳಪಡಿಸುವ ಮೂಲಕ ಹ್ಯಾಪಿ ಹೈಪೋಕ್ಸಿಯಾ ಇದೆಯೇ ಎಂಬುದನ್ನು ಪತ್ತೆ ಹಚ್ಚಬಹುದು.

ಕಾರಣವೇನು?

ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುವ ರೋಗಿಗಳಲ್ಲಿ ಶೇ.1 ಮಂದಿ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಸ್ಟಮ್ಂದ ಸಾವಿಗೀಡಾಗುತ್ತಿದ್ದಾರೆ. ರೋಗಿಯ ದೇಹದಲ್ಲಿನ ಪ್ರತಿರೋಧಕ ಕಣಗಳು ಏಕಾಏಕಿ ತನ್ನ ಕ್ರಿಯೆಯನ್ನು ತೀವ್ರಗೊಳಿಸುವುದು ಹಾಗೂ ಚಿಕಿತ್ಸೆ ವೇಳೆ ರಕ್ತನಾಳದಲ್ಲಿ ಹೆಪು್ಪಗಟ್ಟಿರುವ ರಕ್ತದಲ್ಲಿನ ರಾಸಾಯನಿಕ ಅಂಶಗಳು ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಮ್ಲಜನಕ ಪ್ರಮಾಣ ಏಕಾಏಕಿ ಕಡಿಮೆಯಾಗಿ ರೋಗಿ ಮೃತಪಡುತ್ತಾನೆ ಎಂದು ಶ್ವಾಸಕೋಶ ತಜ್ಞರು ತಿಳಿಸಿದ್ದಾರೆ.

ಕೋಟ್ಸ್

ಆರೋಗ್ಯವಂತ ವ್ಯಕ್ತಿಯಲ್ಲಿ ಆಮ್ಲಜನಕ ಪ್ರಮಾಣವು ಸಾಮಾನ್ಯವಾಗಿ ಶೇ. 95ಕ್ಕಿಂತ ಹೆಚ್ಚಿರುತ್ತದೆ. ಆದರೆ, ಹ್ಯಾಪಿ ಹೈಪೋಕ್ಸಿಯಾ ಸ್ಥಿತಿಗೆ ತಲುಪುವವರಲ್ಲಿ ಆಮ್ಲಜನಕ ಪ್ರಮಾಣ 70ಕ್ಕಿಂತ ಕಡಿಮೆ ಹೊಂದಿರುತ್ತಾರೆ. ಈ ಸ್ಥಿತಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೆ ರೋಗಿ ಏಕಾಏಕಿ ಅಸ್ವಸ್ಥಗೊಂಡು ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾನೆ. ಹಾಗಾಗಿ ನಿತ್ಯ ಆಕ್ಸಿಮೀಟರ್​ನಿಂದ ಆಮ್ಲಜನಕ ಪ್ರಮಾಣ ಪರೀಕ್ಷಿಸಿಕೊಳ್ಳುವುದು ಉತ್ತಮ.

| ಡಾ. ನಾಗರಾಜ್ ನಿರ್ದೇಶಕರು,

ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ

ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಬಳಿಕ ರಕ್ತ ಹೆಪು್ಪಗಟ್ಟುವುದನ್ನು ತಡೆಯಲು ವೈದ್ಯರು ಸೂಚಿಸುವ ಔಷಧ ಸೇವಿಸುವುದನ್ನು ಬಿಟ್ಟುಬಿಡುತ್ತಾರೆ. ಏಕಾಏಕಿ ಉಸಿರಾಟದ ಸಮಸ್ಯೆಗೆ ಒಳಗಾಗಿ ಮೃತಪಡು ತ್ತಾರೆ. ಇದಕ್ಕೆ ಕಾರಣ ಸೋಂಕಿಗೆ ನೀಡುವ ಚಿಕಿತ್ಸೆಯಲ್ಲ. ಬದಲಿಗೆ ರೋಗಿಯ ದೇಹದಲ್ಲಿನ ಪ್ರತಿರೋಧ ಕಣಗಳ ತೀವ್ರ ವರ್ತನೆ.

| ಡಾ. ಶಿವಕುಮಾರ್ ಕೋವಿಡ್ ಮೆಡಿಕಲ್ ಆಫೀಸರ್ (ಸಿಎಂಒ) ವಿಕ್ಟೋರಿಯಾ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net