

ನವದೆಹಲಿ: ಅಂಗಡಿ ಮಾಲೀಕರೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಪೊಲೀಸ್ ಪೇದೆಯೊಬ್ಬರು ಸಿಬಿಐ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನವದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ.
ಬಂಧಿತ ಪೊಲೀಸ್ ಪೇದೆಯನ್ನು ಭೀಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಮಂಗೋಲ್ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್ ಜಾಗದ ವಿಚಾರವಾಗಿ ಲಂಚ ಪಡೆಯುವ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಬಂಧಿತ ಪೇದೆ ಭೀಮ್ ಸಿಂಗ್ ಮಂಗೋಲ್ಪುರಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರೊಬ್ಬರಿಗೆ ಪಾರ್ಕಿಂಗ್ಗಾಗಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದೀರಾ ಎಂದು ಹೇಳಿ ಮೊದಲಿಗೆ ಧಮ್ಕಿ ಹಾಕಿದ್ದರು. ಈ ವಿಚಾರವನ್ನು ಮೇಲಿನ ಅಧಿಕಾರಿಗಳಿಗೆ ಹೇಳಿ ಅಂಗಡಿಯನ್ನು ಖಾಲಿ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಹೊರಟು ಹೋಗಿದ್ದರು.
ಕೆಲ ದಿನಗಳ ಬಳಿಕ ಈ ಸಂಬಂದ ಅಂಗಡಿ ಮಾಲೀಕನೊಂದಿಗೆ ತಗಾದೆ ತೆಗೆದಿರುವ ಪೊಲೀಸ್ ಪೇದೆ ಭೀಮ್ ಸಿಂಗ್ ವಿಚಾರವನ್ನು ಯಾರಿಗೂ ಹೇಳಬಾರದೆಂದರೆ 50 ಸಾವಿರ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸ್ ಪೇದೆಯ ಕಿರುಕುಳದಿಂದ ತೀವ್ರವಾಗಿ ಮನನೊಂದಿದ್ದ ಅಂಗಡಿ ಮಾಲೀಕ ಈ ಕುರಿತು ಸಿಬಿಐಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗೆ ಹಣ ಕೊಡಲು ಒಪ್ಪಿರುವುದಾಗಿ ಅಂಗಡಿ ಮಾಲೀಕನಿಗೆ ಹೇಳಲು ಸೂಚಿಸಿದ್ದಾರೆ. ಅಧಿಕಾರಿಗಖು ಹೇಳಿದಂತೆ ಕೇಳಿದ ಅಂಗಡಿ ಮಾಲೀಕ ಪೊಲೀಸ್ ಪೇದೆಯನ್ನು ತನ್ನ ಅಂಗಡಿ ಬಳಿ ಬರುವಂತೆ ಹೇಳಿದ್ದಾನೆ. ಬಳಿಕ ಹಣ ಪಡೆಯಲು ಮೂವರು ಪೊಲೀಸ್ ಪೇದೆಗಳೊಂದಿಗೆ ಆಗಮಿಸಿದ ಭೀಮ್ ಸಿಂಗ್ ರೆಡ್ ಹ್ಯಾಂಡ್ ಆಗಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಇನ್ನಿಬ್ಬರು ಪೊಲೀಸರು ಪೇದೆ ಭೀಮ್ ಸಿಂಗ್ನನ್ನು ಬಿಟ್ಟು ಓಡುತ್ತಿರುವುದು ಕಂಡು ಬರುತ್ತದೆ. ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.