ಘೋಸಿ ಉಪಚುನಾವಣೆ ಗೆಲುವು; ಇಲ್ಲಿಂದಲ್ಲೇ ಬಿಜೆಪಿಯ ಪತನ ಆರಂಭವೆಂದ ಅಖಿಲೇಶ್​ ಯಾದವ್

Akhilesh Yadav
Published on

ಲಖನೌ: ಉತ್ತರಪ್ರದೇಶದ ಮೌ ಜಿಲ್ಲೆಯ ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯಾ ಒಕ್ಕೂಟದ (ಸಮಾಜವಾದಿ ಪಕ್ಷ) ಅಭ್ಯರ್ಥಿ​ ಬಿಜೆಪಿ ವಿರುದ್ಧ 42 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಸುಧಾಕರ್​ ಸಿಂಗ್​ ಬಿಜೆಪಿಯ ಧಾರಾ ಸಿಂಗ್​ ಚೌಹಾಣ್​ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಉತ್ತರಪ್ರದೇಶ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಹೊಸ ಸಂದೇಶವನ್ನು ರವಾನೆ ಮಾಡಿದ್ದಾರೆ.

ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿನ ಕುರಿತು ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರಪ್ರದೇಶ ವಿಧಾನಸಭೆ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ಇದು ದುರಹಂಕಾರ ಹಾಗೂ ದ್ವೇಷದ ಸೋಲು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ರಾಜ್ಯದ ಜನತೆ ಇಂಡಿಯಾ ಒಕ್ಕೂಟದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತಮ್ಮಲ್ಲಿದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.

ವಿಪಕ್ಷಗಳ ಒಕ್ಕೂಟ ಇಂಡಿಯಾದ ತಂತ್ರಗಾರಿಕೆ ಫಲಿಸಿದ್ದು, ಈ ಉಪಚುನಾವಣೆಯ ಗೆಲುವಿನ ಸಂದೇಶ ಇಡೀ ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಿ ಪರಿಣಮಿಸಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಪತನವಾಗುವುದು ನಿಶ್ಚಿತ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರಪ್ರದೇಶ ವಿಧಾನಸಭೆ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ತಿಳಿಸಿದ್ದಾರೆ.

ಇತ್ತ ಘೋಸಿ ವಿಧಾನಸಭೆ ಉಪಚುನಾವಣೆ ಸೋಲು ಬಿಜೆಪಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಡಿಸಿಎಂ ಕೇಶವ್​ ಪ್ರಸಾದ್​ ಮೌರ್ಯ ಸೇರಿದಂತೆ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಸಚಿವ ಸಂಪುಟದ ಸದಸ್ಯರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net