ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ

ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ
Published on

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬುಧವಾರ ಅಬಕಾರಿ ಇಲಾಖೆ ಅಧಿಕಾರಿಗಳು ಅಂಗಡಿ- ಮುಂಗಟ್ಟು ಮತ್ತು ಹಲವು ಮನೆಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಜೂ.17ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಮದ್ಯ ವ್ಯಸನಕ್ಕೆ ಯುವಸಮೂಹ ಬಲಿ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಮಾಹಿತಿ ಕಲೆಹಾಕಿ ಅರಿವು ಮೂಡಿಸುವ ಕಾರ್ಯ ನಡೆಸಿತು.

ಬುಧವಾರ ಅಬಕಾರಿ ಉಪವಿಭಾಗ ಇನ್ಸ್‌ಪೆಕ್ಟರ್ ನಾಗೇಂದ್ರ ಮತ್ತು ಮತ್ತು ವಲಯ ವ್ಯಾಪ್ತಿಯ ಇನ್ಸ್‌ಪೆಕ್ಟರ್ ನಾಗಲಿಂಗಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ವಿವಿಧೆಡೆ ದಾಳಿ ನಡೆಸಿದರು. ಗ್ರಾಮದ 6ಕ್ಕೂ ಹೆಚ್ಚು ಅಂಗಡಿ, ಮುಂಗಟ್ಟುಗಳು ಮತ್ತು 10ಕ್ಕೂ ಹೆಚ್ಚು ಮನೆಗಳಿಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟದ ಸರಕು ಸಿಗಲಿಲ್ಲ.

ವಿಜಯವಾಣಿಯೊಂದಿಗೆ ಮಾತನಾಡಿದ ಇನ್ಸ್‌ಪೆಕ್ಟರ್ ನಾಗಲಿಂಗಸ್ವಾಮಿ, ಗ್ರಾಮಪಂಚಾಯಿತಿ ಕಚೇರಿಗೆ ತೆರಳಿ ಗ್ರಾ.ಪಂ. ಸದಸ್ಯರು ಮತ್ತು ಪಿಡಿಒ ಜತೆ ಅಕ್ರಮ ಮದ್ಯ ಮಾರಾಟದ ಕುರಿತು ಹಾಗೂ ಇತ್ತೀಚೆಗೆ ಗ್ರಾಮದಲ್ಲಿ ಮತ್ತೊಂದು ಮದ್ಯದಂಗಡಿ ತೆರೆಯಲು ಅನುಮತಿ ಕೋರಿ ನೀಡಿರುವ ಅರ್ಜಿಯ ಕುರಿತು ಸಭೆ ಆಯೋಜಿಸಿ ಚರ್ಚಿಸಲಾಗಿದೆ. ಮದ್ಯದಂಗಡಿ ತೆರೆಯಲು ಅನುಮತಿ ಕೋರಿರುವ ವ್ಯಕ್ತಿ ಅಗತ್ಯ ದಾಖಲೆಗಳನ್ನು ಸಂಪೂರ್ಣವಾಗಿ ಒದಗಿಸಿಲ್ಲ. ಸಂಪೂರ್ಣವಾಗಿ ಒದಗಿಸಿದ ನಂತರ ಎನ್‌ಒಸಿ ನೀಡುವ ಕುರಿತು ಪಂಚಾಯಿತಿ ನಿರ್ಧರಿಸಲಿದೆ ಎಂದು ಪಿಡಿಒ ತಿಳಿಸಿದ್ದಾರೆ.

ಇದೇ ವೇಳೆ ಗ್ರಾಮದಲ್ಲಿರುವ ಸತೀಶ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ನೀಡಿದ ದೂರಿನನ್ವಯ ಮದ್ಯದಂಗಡಿಯಿಂದ 9 ವಿವಿಧ ಮದ್ಯದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಅದನ್ನು ಬೆಂಗಳೂರಿನ ಅಬಕಾರಿ ಇಲಾಖೆಯ ಕೇಂದ್ರೀಯ ರಾಸಾಯನಿಕ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ದಾಳಿ ವೇಳೆ ಅಬಕಾರಿ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net