

ಬೆಂಗಳೂರು: ಅಪಘಾತ ನಡೆದ ಸಂದರ್ಭದಲ್ಲಿ ವಾಹನಕ್ಕೆ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ (Vehicle FC) ಇಲ್ಲದಿದ್ದರೂ ವಿಮಾ ಕಂಪನಿ ಅಪಘಾತದಲ್ಲಿ ನೊಂದವರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ, ಪರಿಹಾರದ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಕಂಪನಿ ವಸೂಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಅಪಘಾತಕ್ಕೆ ಒಳಗಾದ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ಪರಿಹಾರಕ್ಕೆ ಸೂಚಿಸಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಶ್ರೀರಾಮ ಜನರಲ್ ಇನ್ಸುರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ವಾಹನ ಮಾಲೀಕರು ತನ್ನ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿಲ್ಲ. ಇದು ವಾಹನ ಮಾಲೀಕರ ಮೂಲಭೂತ ಉಲ್ಲಂಘನೆಯಾಗಿದೆ. ಈ ಪ್ರಕ್ರಿಯೆಯಲ್ಲಿ ವಾಹನ ಮಾಲೀಕರ ತಪ್ಪೂ ಇದೆ. ಹೀಗಾಗಿ ವಿಮಾ ಕಂಪನಿಗಳ ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಮಾಲೀಕರೇ ಪಾವತಿ ಮಾಡಬೇಕು ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.
ಮುಂದಿನ ಎಂಟು ವಾರಗಳಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿ ಮಾಡಬೇಕು. ಬಳಿಕ ವಾಹನದ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಜತೆಗೆ, 2013ರ ಜೂ.17ರಂದು ಘಟನೆ ನಡೆದಿದೆ. ಘಟನೆಯಿಂದಾಗಿ ಬೈಸಿಕಲ್ನಲ್ಲಿ ಬರುತ್ತಿದ್ದ ವ್ಯಕ್ತಿ ಪ್ರಜ್ಞಾಹೀನನಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಚಿಕಿತ್ಸೆ ಪಡೆದು ಸುಮಾರು ಒಂದು ತಿಂಗಳ ಬಳಿಕ ಮೃತ ಪಟ್ಟಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ಘಟನೆ ನಡೆದ ದಿನದಿಂದಲೂ ಸಾಯುವವರೆಗೂ ಪ್ರಜ್ಞಾಹೀನ ಸ್ಥಿತಿಗೆ ತುತ್ತಾಗಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಾತ್ರ ಹೃದಯ ಸ್ಥಂಬನದಿಂದ ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ವೈದ್ಯಕೀಯ ದಾಖಲೆಗಳ ಪ್ರಕಾರ ತಲೆಗೆ ತೀವ್ರತರದ ಪೆಟ್ಟಾದ ಹಿನ್ನೆಲೆಯಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಮೃತ ವ್ಯಕ್ತಿ ಹೃದಯ ಸ್ಥಂಬನದಿಂದ ಮೃತಪಟ್ಟಿದ್ದಾರೆ ಎಂಬ ವಾದವನ್ನು ಒಪ್ಪಲಾಗದು ಎಂದು ತಿರಸ್ಕರಿಸಿದೆ. ಎರಡೂ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಪೀಠ, ಪರಿಹಾರ ಮೊತ್ತವನ್ನು 13.44 ಲಕ್ಷ ರೂ.ಗಳಿಂದ 13.88 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದ್ದು, ಶೇ.6 ವಾರ್ಷಿಕ ಬಡ್ಡಿ ಸೇರಿಸಿ ಪಾವತಿ ಮಾಡಲು ಆದೇಶಿಸಿದೆ.
ಹೋಸಕೋಟೆ- ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಬೈಸಿಕಲ್ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನಂದೀಶಪ್ಪ ಎಂಬುವರಿಗೆ ಗೂಡ್ಸ್ ವಾಹನವೊಂದು ಡಿಕ್ಕಿಹೊಡೆದಿತ್ತು. ಇದರಿಂದ ತಲೆಗೆ ತೀವ್ರತರದ ಪೆಟ್ಟಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 13.88 ಲಕ್ಷ ರೂ.ಗಳ ಪರಿಹಾರ ನೀಡಲು ಆದೇಶಿಸಿತ್ತು. ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಅಪಘಾತದಲ್ಲಿ ಮೃತರಾದ ವ್ಯಕ್ತಿಯ ಪತ್ನಿ ಮತ್ತು ನ್ಯಾಯಾಧಿಕರಣದ ಆದೇಶ ರದ್ದುಕೋರಿ ವಿಮಾ ಕಂಪನಿಗಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು.